ರೇವಂತ್ ದೇಶಪಾಂಡೆ. ಆಸೆ, ಆಕಾಂಕ್ಷೆ, ಚಟಗಳೇ ತುಂಬಿಕೊಂಡಿರೋ ಕೋಟ್ಯಧಿಪತಿಯ ಮಗ. ಮ್ಯೂಸಿಕ್ ಜಗತ್ತಿನಲ್ಲಿ ವಿಹರಿಸೋ ಈತನಿಗೆ ಅಪ್ಪ ಅಂದ್ರೇನೇ ಆಗಲ್ಲ. ಆತನ ಭಾವನೆಗಳಿಗೆ ತದ್ವಿರುದ್ಧವಾಗಿ ಹುಡುಗಿ ಮೋಹನ. ಸಂಪ್ರದಾಯಸ್ಥರ ಮನೆಯ ಶಾಸ್ತ್ರೀಯ ಸಂಗೀತ ಕಲಿತ ಹುಡುಗಿ. ಇಬ್ಬರಿಗೂ ಪ್ರೀತಿಯಾಗುತ್ತೆ. ಮೋಹವಾಗುತ್ತೆ. ಅನುಮಾನ ಮೂಡುತ್ತೆ. ಪ್ರೀತಿ ದ್ವೇಷವಾಗುತ್ತೆ. ರಾಕ್ ಸ್ಟಾರ್ ಮ್ಯೂಸಿಕ್ ಕಿವಿಯಲ್ಲಿ ಗುಂಯ್ ಅಂತಿರುತ್ತೆ. ಹಾಡುಗಳು ರೋಮಾಂಚಕ.. ಮನಮೋಹಕ.. ಕಣ್ಣು ತಂಪು ತಂಪು ಕೂಲ್ ಕೂಲ್. ಪವನ್ ಒಡೆಯರ್ ಮತ್ತೊಂದು ಪ್ರೇಮಕಥೆಯಲ್ಲಿ ಗೆದ್ದಿರೋದು ಸಾಬೀತಾಗುತ್ತೆ.
ಇಶಾನ್ ಸಖತ್ ಕಾನ್ಫಿಡೆನ್ಸ್ನಲ್ಲಿ ನಟಿಸಿದ್ದಾರೆ. ಆಶಿಕಾ ಮುದ್ದು ಮುದ್ದು ಚುಟುಚುಟು. ಇವರಿಬ್ಬರ ಲವ್ ಸ್ಟೋರಿಯಷ್ಟೇ ಅಲ್ಲ, ತಂದೆ ತಾಯಂದಿರ ವಾತ್ಸಲ್ಯದ ಕಥೆಯೂ ಚಿತ್ರದಲ್ಲಿದೆ. ನೋಡುಗರ ಕಣ್ಣನ್ನು ಪವನ್ ಒಡೆಯರ್ ಒದ್ದೆ ಮಾಡಿಸುತ್ತಾರೆ. ಎಲ್ಲ ಮೆಲೋಡ್ರಾಮಗಳ ನಡುವೆ ರಿಯಾಲಿಟಿಗೂ ಹತ್ತಿರದಲ್ಲಿರೋ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದರಲ್ಲೂ ಯುವ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅಂದಹಾಗೆ ಚಿತ್ರದ ಇನ್ನೊಬ್ಬ ಹೀರೋ ಅರ್ಜುನ್ ಜನ್ಯ. ಹಾಡುಗಳು ಮೋಡಿ ಮಾಡುತ್ತವೆ. ಸಿ.ಆರ್.ಮನೋಹರ್ ಅವರ ಕನಸಿಗೆ ಪವನ್ ಒಡೆಯರ್, ಅರ್ಜುನ್ ಜನ್ಯ, ಇಶಾನ್ ಹಾಗೂ ಆಶಿಕಾ ಜೀವ ತಂದುಕೊಟ್ಟಿದ್ದಾರೆ.