ರಾಣಾ. ಇದೇ ನವೆಂಬರ್ 11ರಂದು ರಿಲೀಸ್ ಆಗುತ್ತಿರೋ ಸಿನಿಮಾ. ಪಡ್ಡೆಹುಲಿ ನಂತರ ಶ್ರೇಯಸ್ ಮಂಜು ನಟಿಸುತ್ತಿರೋ ಚಿತ್ರದಲ್ಲಿ ಆ್ಯಕ್ಷನ್, ರೊಮ್ಯಾನ್ಸ್, ಲವ್, ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್.. ಎಲ್ಲವೂ ಇವೆ. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ರಾಣಾ ಎದುರು ರೀಷ್ಮಾ ನಾಣಯ್ಯ ಹೀರೋಯಿನ್.
ನಾನು ಕಥೆಯನ್ನು ಕೇಳಿದಾಗ ನಂದಕಿಶೋರ್ ಅವರು ಕಥೆ ಹೇಳುವ ರೀತಿ ಇಷ್ಟವಾಯಿತು. ಚಿತ್ರದಲ್ಲಿ ಹೀರೋ ಅಲ್ಲ, ಕಥೆ ಹೀರೋ ಆಗಿದೆ. ಮೊದಲ ಚಿತ್ರ ರಿಲೀಸ್ ಆದ ಮೂರೂವರೆ ವರ್ಷಗಳ ನಂತರ ಬರುತ್ತಿರೋ ಸಿನಿಮಾ ಇದು. ನಿರೀಕ್ಷೆಯೂ ಜೋರಾಗಿಯೇ ಇದೆ ಎನ್ನುತ್ತಾರೆ ರಾಣಾ ಶ್ರೇಯಸ್ ಮಂಜು.
ಪೊಲೀಸ್ ಆಫೀಸರ್ ಆಗುವ ಗುರಿಯಿಟ್ಟುಕೊಂಡಿರೋ ಯುವಕನ ಪಾತ್ರ ನನ್ನದು. ನನ್ನ ಪಾತ್ರಕ್ಕೆ ಎರಡು ಮುಖಗಳಿವೆ. ವಿಶೇಷ ಮ್ಯಾನರಿಸಂ ಇರುವ ರಾಣಾ ಇಂಟ್ರಾವರ್ಟ್. ಅಂತರ್ಮುಖಿ. ಭಾವನೆಗಳನ್ನು ವ್ಯಕ್ತಪಡಿಸುವವನಲ್ಲ. ಇನ್ನೊಂದು ಕಡೆ ಅದೇ ರಾಣಾ ತೀವ್ರವಾಗಿ ರಿಯಾಕ್ಟ್ ಮಾಡುತ್ತಾನೆ. ಅದರಲ್ಲೂ ತಾನು ಕಳೆದುಕೊಳ್ಳೋಕೆ ಏನೂ ಇಲ್ಲ ಎಂದು ಗೊತ್ತಾದಾಗ ಮುಲಾಜಿಲ್ಲದೆ ಮುನ್ನುಗ್ಗುತ್ತಾನೆ. ಅವನನ್ನು ತಡೆಯೋಕೆ ಸಾಧ್ಯವಿಲ್ಲ. ಇಡೀ ಸಿನಿಮಾದಲ್ಲಿ ಈ ಎರಡೂ ಶೇಡ್ ಕ್ಯಾರಿಯಾಗುತ್ತಲೇ ಹೋಗುತ್ತವೆ. ಒಮ್ಮೆ ಯಾವುದಕ್ಕೂ ರಿಯಾಕ್ಟ್ ಮಾಡದ ರಾಣಾ.. ಮತ್ತೊಮ್ಮೆ ಓವರ್ ರಿಯಾಕ್ಟ್ ಮಾಡುವ ರಾಣಾ.. ಈ ಎರಡನ್ನೂ ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ ಎನ್ನುವುದು ಶ್ರೇಯಸ್ ಮಂಜು ಮಾತು.
ಹೀರೋಯಿನ್ ರೀಷ್ಮಾ ನಾಣಯ್ಯ ಬಗ್ಗೆ ಮಾತನಾಡುವ ರಾಣಾ ಅವಳೊಬ್ಬಳು ಟೆರಿಫಿಕ್. ಆಕೆಯ ಡ್ಯಾನ್ಸ್ ಸ್ಟೆಪ್ಸ್‍ಗೆ ಮ್ಯಾಚ್ ಮಾಡುವುದು ಕಷ್ಟವಾಗುತ್ತಿತ್ತು. ಆಕೆಗೆ ತಕ್ಕಂತೆ ಹೆಜ್ಜೆ ಹಾಕಿದ್ದೇನೆ ಅದಕ್ಕೆ ಕಾರಣ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಎನ್ನುತ್ತಾರೆ ಶ್ರೇಯಸ್. ಪಡ್ಡೆಹುಲಿ ಶ್ರೇಯಸ್ ಮಂಜು ಹಾಗೂ ಏಕ್ ಲವ್ ಯಾ ರೀಷ್ಮಾ ನಾಣಯ್ಯ ಇಬ್ಬರಿಗೂ ಇದು ಸೆಕೆಂಡ್ ಪ್ರಾಜೆಕ್ಟ್. ಹೀಗಾಗಿ ನಿರೀಕ್ಷೆಯೂ ಹೆಚ್ಚು. ನಿರ್ದೇಶಕ ನಂದ ಕಿಶೋರ್ ಮತ್ತು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.