` Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
prakash rai, udaya marakini image
prakash rai, udaya marakini

ಪ್ರಕಾಶ್ ರೈ ಪ್ರತಿಭಾವಂತ, ಆದರೆ ದುರಹಂಕಾರಿ - ಕೆಲವು ವರ್ಷಗಳ ಹಿಂದೆ ಇಂಥಾದ್ದೊಂದು ಸಾಲು ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಸಾಮಾನ್ಯವಾಗಿ ನಮ್ಮ ನಾಯಕ ನಟರು ಇಂಥಾ ಕಾಮೆಂಟುಗಳನ್ನು ಸ್ಪೋರ್ಟಿವ್ ಆಗಿ ಸ್ವೀಕರಿಸುವುದಿಲ್ಲ. ತಾವು ಪರ್ಫೆಕ್ಟ್, ಆ ಕಾರಣಕ್ಕೇ ಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ ಅನ್ನುವುದು ಅವರ ತರ್ಕ. ಆದರೆ ಪ್ರಕಾಶ್ ರೈ ಸಿಟ್ಟು ಮಾಡಿಕೊಳ್ಳಲಿಲ್ಲ. ಬದಲಾಗಿ ಗಹಗಹಿಸಿ ನಕ್ಕರು. “ಕರೆಕ್ಟಾಗಿ ಬರೆದಿದ್ದಾರೆ ನೋಡಿ, ಈ ಜಗತ್ತಲ್ಲಿ ಪ್ರತಿಭಾವಂತರಿಗಷ್ಟೇ ದುರಹಂಕಾರಿಗಳಾಗೋ ಹಕ್ಕು ಇರೋದು. ಪ್ರಕಾಶ್ ರೈ ಕೆಟ್ಟ ನಟ, ಆದರೆ ಒಳ್ಳೆಯವನು ಅಂತ ಅವರೇನಾದರೂ ಬರೆದಿದ್ದರೆ ನಂಗೆ ಬೇಜಾರಾಗಿರೋದು ಅಂದುಬಿಟ್ಟರು”.

prakash raj, k balachander (pic km veeresh)

ಅವರು ಆ ಮಾತು ಹೇಳಿದ ನಂತರ ಬೆಂಗಳೂರು –ಚೆನ್ನೈ ನಡುವೆ ಸಾಕಷ್ಟು ರೈಲುಗಳು ಓಡಾಡಿವೆ. ರೈ ಈಗ ಮಾಗಿದ್ದಾರೆ. ವಯಸ್ಸು, ಅನುಭವ, ಖ್ಯಾತಿ, ಪಡಕೊಂಡಿದ್ದು, ಕಳಕೊಂಡಿದ್ದು, ಇವೆಲ್ಲವೂ ಅವರನ್ನು ಹದವಾಗಿಸಿದೆ. ಮಧ್ಯವಯಸ್ಕನ ಮಾತಲ್ಲಿ ಆಗಾಗ ಬಂದುಹೋಗುವ ಆಧ್ಯಾತ್ಮದ ಝಲಕ್ಕುಗಳು ರೈ ಮಾತಲ್ಲೂ ಕಾಣಿಸುತ್ತವೆ. ಹಳೆಯದನ್ನು ನೆನಪಿಸಿಕೊಂಡು ಭಾವುಕರಾಗುವ ಪರಿಯೂ ಥೇಟು ಮಧ್ಯವಯಸ್ಕನ ಪ್ರಲಾಪಗಳೇ. ಹಳೆಯ ಜಾಗ, ಹಳೇ ನೆನಪುಗಳು, ಹಳೇ ನಂಟು, ಹಳೇ ಗಂಟು, ಹಳೇ ಗೆಳೆಯರು, ಎಲ್ಲವೂ ನೆನಪಾಗುವುದು ಈ ವಯಸ್ಸಲ್ಲೇ.  ರೈ ಕೊಂಚ ಬದಲಾಗಿದ್ದಾರೆ. ಅವರನ್ನೀಗ ಯಾರೂ ತಮಿಳಿನ ಖ್ಯಾತ ಖಳನಟ ಎಂದು ಕರೆಯುವ ಹಾಗಿಲ್ಲ. ಅ ಬಿರುದನ್ನು ದಾಟಿ ಅವರು ಬಲುದೂರ ಸಾಗಿದ್ದಾರೆ. ಅವರು ಈಗ ಒಳ್ಳೆಯ ಚಿತ್ರಗಳ ನಿರ್ಮಾಪಕ ಮತ್ತು ನಿರ್ದೇಶಕನೂ ಹೌದು. ತಾನು ನಟಿಸುವ ಕಮರ್ಷಿಯಲ್ ಚಿತ್ರಗಳಲ್ಲಿ ಬರುವ ಹಣವನ್ನು ಒಳ್ಳೆಯ ಚಿತ್ರಗಳ ನಿರ್ಮಾಣಕ್ಕೆ ಸುರಿಯುತ್ತಾರೆ. ಅದರಿಂದ ಲಾಭವೇನೂ ಬರುವುದಿಲ್ಲ, ಬದಲಾಗಿ ನಷ್ಟವಾಗುವ ಸಾಧ್ಯತೆಯೇ ಜಾಸ್ತಿ ಅಂತ ಗೊತ್ತಿದ್ದರೂ ಹಿಂಜರಿಯುವುದಿಲ್ಲ. ತಾನು ಈ ಎತ್ತರಕ್ಕೇರುವುದಕ್ಕೆ ಕಾರಣರಾದ ಬಾಲಚಂದರ್ ಅವರನ್ನು ರೈ ಇಂದಿಗೂ ತನ್ನ ಎದೆಯಲ್ಲಿಟ್ಟುಕೊಂಡಿದ್ದಾರೆ. ಅವರಿಗೋಸ್ಕರವೇ ಚಿತ್ರಗಳನ್ನು ನಿರ್ಮಿಸುತ್ತಾರೆ ಹಾಗೂ ಕಳಕೊಳ್ಳುತ್ತಾರೆ. ಉಳಿಯುವುದು ಪ್ರೀತಿಯೊಂದೇ.

prakash rai (pic - km veeresh)

ನಾವು ಬದಲಾಗಿಲ್ಲ. ಕನ್ನಡದ ನಟರು ಗಡಿದಾಟಿದ ತಕ್ಷಣ ನಮ್ಮ ಭಾಷಾಭಿಮಾನ ಜಾಗೃತಗೊಳ್ಳುತ್ತದೆ. ರಜನಿಕಾಂತ್ ನಮ್ಮವನೇ ಕಣ್ರೀ, ಇಲ್ಲೇ ಬಿಟಿಎಸ್ ಬಸ್ಸಲ್ಲಿ ಕಂಡಕ್ಟರ್ ಆಗಿದ್ದ ಅಂತೀವಿ. ರೈ ಕೂಡಾ ಇಲ್ಲೇ ಕಲಾಕ್ಷೇತ್ರದ ಮೆಟ್ಟಲಲ್ಲಿ ಕುಳಿತುಕೊಂಡು ಸಿಗರೇಟು ಸೇದುತ್ತಿದ್ದ ಅಂತೀವಿ. ಆದರೆ ರೈ ಈಗ ತನ್ನನ್ನು ಜಗತ್ತಿನ ಕೂಸು ಅಂತ ಅನ್ನುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲೇನೂ ತಪ್ಪಿಲ್ಲ. ಕಾಲಿವುಡ್ಡಾಯಿತು, ಬಾಲಿವುಡ್ಡಾಯಿತು, ಈಗ ಹಾಲಿವುಡ್ಡಿನತ್ತ ಅವರ ನಡಿಗೆ ಸಾಗಿದೆ. ಹಾಗಾಗಿ ನಾವು ಕೂಡಾ ಅವರನ್ನು ಜಗತ್ತಿನ ಕೂಸಾಗಿಯೇ ನೋಡಿದರೆ ಚನ್ನ. ಬೇರುಗಳಿಂದ ಕಳಚಿಕೊಳ್ಳದೆಯೇ ಆಕಾಶದತ್ತ ಕೈಚಾಚುವ ವ್ಯಕ್ತಿಗಳನ್ನು ಇಷ್ಟಪಡೋಣ. ಅವ ನಮ್ಮವ ಅನ್ನುವ ಹೆಮ್ಮೆಯ ಜೊತೆಗೇ ನಮ್ಮ ನೆಲದಾಚೆಗೆ ಆತ ಮಾಡಿದ ಸಾಧನೆಗಳನ್ನು ಮೆಚ್ಚುಗೆಯಿಂದ ನೋಡೋಣ. ರೈ ಎಷ್ಟೇ ಭಾಷೆಗಳಲ್ಲಿ ನಟಿಸಲಿ, ಅವರೊಳಗಿರುವುದು ಅಪ್ಪಟ ಕನ್ನಡದ ಮನಸ್ಸು ಅನ್ನುವುದನ್ನು ಮರೆಯದೇ ಇರೋಣ.

prakash rai (pic km veeresh)

ಹಳೆಯ ಗೆಳೆಯನ ಪ್ರಚಂಡ ಬೆಳವಣಿಗೆಯನ್ನು ಸಂತೋಷ ಮತ್ತು ಸೋಜಿಗದಿಂದ ನೋಡುತ್ತಿರುವ ಈ ತಂಪುಹೊತ್ತಲ್ಲಿ ನನಗೆ ಮೂರು ಪ್ರಸಂಗಗಳು ನೆನಪಾಗುತ್ತವೆ. ಇಪ್ಪತ್ತೈದು ವರ್ಷದ ಹಿಂದೆ ನಾನು ಪದ್ಮನಾಭನಗರದ 12ಬಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಅದೆಲ್ಲಿಂದಲೋ ಮಾಯಕದಲ್ಲಿ ಬಂದವರಂತೆ ರೈ ಪ್ರತ್ಯಕ್ಷರಾದರು. ಅವರ ಜೊತೆಗೆ ನಾನು ಸ್ಟಾರ್ಟ್ ಅಗೋಲ್ಲ ಅಂತ ಹಠ ಮಾಡುತ್ತಿದ್ದ ಹಳೇ ಟೀವಿಎಸ್ 50 ಗಾಡಿ. ನನ್ನನ್ನು ನೋಡಿದ್ದೇ ತಡ, ಬನ್ನಿ ನಿಮ್ಮಾಫೀಸಿಗೆ ಡ್ರಾಪ್ ಕೊಡ್ತೀನಿ ಅಂತ ಆಮಿಷ ತೋರಿಸಿದರು. ನಾನು ಆರಡಿ, ಅವರೂ ಆರಡಿ. ಟೀವಿಎಸ್ 50 ಮೇಲೆ ನಮ್ಮಿಬ್ಬರ ಸವಾರಿ ಹೇಗಿರಬಹುದು ಅನ್ನುವುದನ್ನು ಊಹಿಸಿಯೇ ನಾನು ಗಡಗಡ ನಡುಗಿದೆ. ಆಗ ರೈ ದೂರದರ್ಶನದ ಒಂದೆರಡು ಟೀವಿ ಸೀರಿಯಲ್ಲುಗಳಲ್ಲಿ ನಟಿಸುತ್ತಿದ್ದರು. ನಟ ಉದಯ್ ಹುತ್ತಿನಗದ್ದೆಯವರನ್ನು ತನ್ನ ಪ್ರತಿಸ್ಪರ್ಧಿ ಎಂದು ಭಾವಿಸಿಕೊಂಡಿದ್ದರು. ಆತ ಕಾಣೋದಕ್ಕೆ ನಂಗಿಂತ ಚೆನ್ನಾಗಿರಬಹುದು ಕಣ್ರೀ. ಆದರೆ ಕೆಮರಾ ಮುಂದೆ ನಿಂತರೆ ನಾನವನನ್ನು ಬೀಟ್ ಮಾಡೇ ಮಾಡ್ತೀನಿ, ಬೇಕಿದ್ರೆ ಬೆಟ್ ಕಟ್ತೀನಿ ಎಂದು ಗುಡುಗಿದರು. ಆರಂಭ ಎಂಬ ಒಂದೇ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಉದಯ್ ಈಗ ಆನಂದರಾವ್ ಸರ್ಕಲಲ್ಲಿ ಕಲರ್ ಲ್ಯಾಬ್ ಇಟ್ಟುಕೊಂಡಿದ್ದಾರೆ. ಚೆನ್ನೈನಲ್ಲಿ ಅಂಥಾ ನೂರಾರು ಲ್ಯಾಬುಗಳಲ್ಲಿ ರೈ ಫೋಟೋ ಪ್ರಿಂಟ್ ಆಗುತ್ತಿದೆ.

ts nagabharana, prakash raj during nagamandala pressmeet

1998ರಲ್ಲಿ ನಾನು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆಸಮಿತಿಯ ಸದಸ್ಯನಾಗಿದ್ದಾಗ, ನಾಗಮಂಡಲ ಚಿತ್ರ ಕೂಡಾ ಕಣದಲ್ಲಿತ್ತು. ಆ ಚಿತ್ರದಲ್ಲಿ ತನ್ನ ಅಭಿನಯಕ್ಕೆ ಶ್ರೇಷ್ಠ ನಟ ಪ್ರಶಸ್ತಿ ಸಿಗಬಹುದು ಅನ್ನುವ ನಿರೀಕ್ಷೆಯಲ್ಲಿದ್ದರು ರೈ. ಆದರೆ ಅದು ಅಮೆರಿಕಾ ಅಮೆರಿಕಾ ಚಿತ್ರದ ನಟನೆಗಾಗಿ ರಮೇಶ್ ಪಾಲಾಯಿತು. ಸಮಿತಿ ಅಧ್ಯಕ್ಷರಾಗಿದ್ದ ಜಿವಿ.ಅಯ್ಯರ್ ಅವರ ಕಿತಾಪತಿಯಿಂದಾಗಿಯೇ ತನಗೆ ಪ್ರಶಸ್ತಿ ತಪ್ಪಿಹೋಗಿದ್ದು ಎಂದು ಬಲವಾಗಿ ನಂಬಿದ್ದ ರೈ ನನ್ನ ಮುಂದೆ ಅಯ್ಯರ್ ಬಗ್ಗೆ ಕಿಡಿ ಕಾರಿದ್ದರು. ಅದಾಗಿ ಒಂದು ವರ್ಷದ ನಂತರ ರೈ ಹೇಳಿದ್ದು ಹೀಗೆ – ನಾಗಮಂಡಲ ಚಿತ್ರವನ್ನು ಈಗ ನೋಡುವಾಗ ನನ್ನ ಬಗ್ಗೆಯೇ ನನಗೆ ಅಸಹ್ಯ ಅನಿಸುತ್ತದೆ. ಅಷ್ಟೊಂದು ಮೈ ಬೆಳೆಸಿಕೊಂಡು ನಾನು ಆ ಪಾತ್ರದಲ್ಲಿ ನಟಿಸಬಾರದಾಗಿತ್ತು.

prakash raj and uday (not in pic) at his house in chennai (pic km veeresh)

ಹತ್ತು ವರ್ಷದ ಹಿಂದೆ ಯಾವುದೋ ಸಿನಿಮಾ ಕಾರ್ಯಕ್ರಮದ ಸಲುವಾಗಿ ಚೆನ್ನೈಗೆ ಹೋಗಿದ್ದಾಗ ರೈ ಮನೆಗೆ ಹೋಗಿದ್ದೆ. ಮನೆಬಾಗಿಲಲ್ಲೇ ಒಂದು ಸೂಚನೆಯಿತ್ತು. `ನಿಮ್ಮ ಅಹಂಕಾರ ಮತ್ತು ಪಾದರಕ್ಷೆಗಳನ್ನು ಹೊರಗೇ ಬಿಟ್ಟು ಬನ್ನಿ`. ಅವೆರಡರ ಅಗತ್ಯ ಬೀಳುವುದು ಮನೆಯಾಚೆಗೇ ಅಲ್ಲವೇ ಅಂತ ಅನಿಸಿ ನಗು ಬಂದಿತ್ತು.

ಅಂದಹಾಗೆ ಹಳೆಯ ಟೀಕೆಗೆ ತಿದ್ದುಪಡಿ ಹಾಕುವ ಕಾಲ ಬಂದಿದೆ. ಪ್ರಕಾಶ್ ರೈ ಪ್ರತಿಭಾವಂತ, ಆದರೆ ದುರಹಂಕಾರಿಯಲ್ಲ.

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it." target="_blank">This email address is being protected from spambots. You need JavaScript enabled to view it.

Also See

Udaya Marakini Column In Chitraloka