ಕಾಂತಾರ ಒಂದು ದಂತಕಥೆ. ಈ ಚಿತ್ರ ಕನ್ನಡದಲ್ಲಿ ದಂತಕಥೆಯೇ ಆಗುತ್ತಿದೆ. ರಿಷಬ್ ಶೆಟ್ಟಿ ನಟರಾಗಿ, ನಿರ್ದೇಶಕರಾಗಿ ದಂತಕಥೆಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಹೊಂಬಾಳೆ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್. ಆದರೆ ಇದು ಸ್ವಲ್ಪ ವಿಭಿನ್ನ. ದೈವೀಕ ಹಿಟ್ ಆದ ಸಂಭ್ರಮ. ಕರಾವಳಿಯ ನೆಲದ ಸಂಸ್ಕೃತಿಯ ನೆಲೆಯಲ್ಲಿ ತೆರೆದುಕೊಳ್ಳುವ ಕಾಂತಾರ ಈಗ ಕರಾವಳಿಯ ಮಣ್ಣಿನ ಕಥೆಯಷ್ಟೇ ಅಲ್ಲ. ಕರ್ನಾಟಕದ ಎಲ್ಲ ಕಡೆ ಸಿಕ್ಕ ಓಪನಿಂಗ್, ಮೆಚ್ಚುಗೆಯ ಮಹಾಪೂರ ಚಿತ್ರವನ್ನೀಗ ಗಡಿಯಾಚೆಗೂ ವಿಸ್ತರಿಸಿದೆ.
ಕೆಜಿಎಫ್ ಚಾಪ್ಟರ್ ೧ ಹಾಗೂ ಚಾಪ್ಟರ್ ೨ ನಂತರ ಕಾಂತಾರ ಕೂಡಾ ೧೦೦ ಕೋಟಿ ದಾಖಲೆ ಬರೆದಿದೆ. ಅಂದಹಾಗೆ ಕಾಂತಾರ ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದೆಯೇ ಹೊರತು, ರಿಲೀಸ್ ಆದಾಗ ಆಗಿರಲಿಲ್ಲ. ರಿಲೀಸ್ ಆಗಿದ್ದು ಕನ್ನಡದಲ್ಲಿ ಮಾತ್ರ. ಭರಪೂರ ನಿರೀಕ್ಷೆಗಳಿಲ್ಲದೆಯೇ ಕನ್ನಡದಲ್ಲಿಯೇ ರಿಲೀಸ್ ಆಗಿ ೧೦೦ ಕೋಟಿ ದಾಟಿದ ಸಿನಿಮಾ ಕಾಂತಾರ ಎನ್ನಬಹುದು.
ಇವತ್ತು ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗುತ್ತಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಚಿತ್ರದ ಹೊಣೆ ಹೊತ್ತಿದ್ದು ಇನ್ನೂ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಹಿಂದಿಯಲ್ಲಿ ನಾಳೆ ರಿಲೀಸ್ ಆಗುತ್ತಿದೆ. ಒಟ್ಟಿನಲ್ಲಿ ಕಾಂತಾರ ದಾಖಲೆಗಳ ಸುರಿಮಳೆಯನ್ನೇ ಸುರಿಸುತ್ತಿದೆ.