ಬೆಲ್ ಬಾಟಂ ಪ್ಯಾಂಟುಗಳು. ಉದ್ದನೆಯ ಹಿಪ್ಪಿ ಕೂದಲು.. ಅಥವಾ ಕಿವಿಯನ್ನು ಮುಚ್ಚಬಹುದಾದ ಜೊಂಪು ಜೊಂಪಾದ ಕೂದಲಿನ ಹೇರ್ ಸ್ಟೈಲ್.. ಅಂಬಾಸಿಡರ್ ಕಾರು.. ಎಲ್ಲವೂ ಹಾಕ್ಕೊಂಡು ಹೊರಟರೆ ನಾವೇ 80-90ರ ದಶಕದಲ್ಲಿದ್ದೇವೇನೋ ಎಂಬ ಅನುಮಾನ ಮೂಡೋದು ಸಹಜ. ಸ್ಟೈಲ್ ಅನ್ನೋದು ಒಂದು ಕಾಲ ಹಿಂದಕ್ಕೇ ಹೋಗುತ್ತಿರುವ ಹೊತ್ತಿನಲ್ಲಿ ಹಳೆಯ ಫ್ಯಾಷನ್ನುಗಳು ಇವತ್ತಿನ ಟ್ರೆಂಡುಗಳಾಗುತ್ತಿರೋ ಸಮಯದಲ್ಲಿ ಇಂತಹ ಟ್ರೆಂಡ್ ಕೂಡಾ ಹೊಸ ಫ್ಯಾಷನ್ ಇರಬಹುದು ಎಂದುಕೊಂಡರೆ ಅಚ್ಚರಿ ಪಡಬೇಕೂ ಇಲ್ಲ.ಆದರೆ ಇದು ಹೆಡ್ ಬುಷ್ ಸಿನಿಮಾ ತಂಡದ ಪ್ರಚಾರದ ಸ್ಟೈಲ್.
ಡಾಲಿ ಧನಂಜಯ್ ನಟಿಸಿ ನಿರ್ಮಾಣ ಮಾಡಿರುವ ಹೆಡ್ ಬುಷ್ ಅಕ್ಟೋಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಇಡೀ ಚಿತ್ರತಂಡ ರೆಟ್ರೋ ಲುಕ್ ಮೊರೆ ಹೋಗಿದೆ. ಕಾಸ್ಟ್ಯೂಮ್ ಡಿಸೈನರ್ ಸಚಿನ ಇದಕ್ಕಾಗಿಯೇ 100ಕ್ಕೂ ಹೆಚ್ಚು ಬೆಲ್ ಬಾಟಂ ಪ್ಯಾಂಟ್ ಮತ್ತು ಟೀಷರ್ಟ್ ವ್ಯವಸ್ಥೆ ಮಾಡಿದ್ದಾರೆ.
ಜನ ಕೇವಲ ನಮ್ಮ ಸಿನಿಮಾವನ್ನಲ್ಲ. ನಮ್ಮ ಪ್ರಚಾರದ ವೈಖರಿಯನ್ನೂ ಗಮನಿಸುತ್ತಾರೆ. ಬಡವ ರಾಸ್ಕಲ್ ಗೆಲುವಿಗೆ ಅದೂ ಒಂದು ಕಾರಣ ಎನ್ನುವ ಡಾಲಿ ಧನಂಜಯ್ ಹೆಡ್ ಬುಷ್ ಪ್ರಚಾರದಿಂದ ಮತ್ತೊಮ್ಮೆ ಬೆಲ್ ಬಾಟಂ ಟ್ರೆಂಡ್ ಶುರುವಾಗುತ್ತಿದೆ ಎನ್ನುತ್ತಾರೆ.
ಡಾಲಿ ಪಿಕ್ಚರ್ಸ್ ಮತ್ತು ರಾಮ್ಕೋ ಸೋಮಣ್ಣ ಅವರ ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಿಸಿರೋ ಚಿತ್ರಕ್ಕೆ ಶೂನ್ಯ ನಿರ್ದೇಶಕ. ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ ಇದೆ. ರವಿಚಂದ್ರನ್, ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶೃತಿ ಹರಿಹರನ್, ಪಾಯಲ್ ರಜಪೂತ್, ರಘು ಮುಖರ್ಜಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.