ಬಣ್ಣದ ಗೆಜ್ಜೆ. 1990ರಲ್ಲಿ ಬಂದಿದ್ದ ಸಿನಿಮಾ. ರವಿಚಂದ್ರನ್, ಅಮಲಾ ನಾಗಾರ್ಜುನ್, ಭಾರತಿ ವಿಷ್ಣುವರ್ಧನ್, ಕಲ್ಯಾಣ್ ಕುಮಾರ್, ದೇವರಾಜ್, ಸುರೇಶ್ ಹೆಬ್ಳೀಕರ್ ಮೊದಲಾದವರು ನಟಿಸಿದ್ದ ಸಿನಿಮಾ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಕ. ಆಗಿನ ಕಾಲಕ್ಕೆ ಅದು ಸೂಪರ್ ಡ್ಯೂಪರ್ ಹಿಟ್. ಹಂಸಲೇಖ ನಿರ್ದೇಶನದ ಹಾಡುಗಳೆಲ್ಲ ಸೂಪರ್ ಹಿಟ್. ಅದರಲ್ಲೂ ಸ್ವಾತಿ ಮುತ್ತಿನ ಮಳೆ ಹನಿಯೇ.. ಇವತ್ತಿಗೂ ಪ್ರೇಮಿಗಳ ಹಾರ್ಟ್ ಫೇವರಿಟ್. ಈಗ ಅದೇ ಸಾಲನ್ನು ಚಿತ್ರದ ಟೈಟಲ್ ಮಾಡಿ ಸಿನಿಮಾ ಮಾಡುತ್ತಿದ್ದಾರೆ ರಮ್ಯಾ. ಜೊತೆಯಾಗಿರೋದು ರಾಜ್ ಬಿ.ಶೆಟ್ಟಿ.
ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಅಧಿಕೃತವಾಗಿ ವಾಪಸ್ ಬಂದಿದ್ದಾರೆ. ರಾಜ್ ಬಿ.ಶೆಟ್ಟಿ ಜೊತೆಗೆ ರಮ್ಯಾ ಸಿನಿಮಾ ಮಾಡುತ್ತಾರೆ ಎಂಬ ವದಂತಿಗಳು ಈಗ ವದಂತಿಗಳಲ್ಲ. ಗಾಳಿಸುದ್ದಿಗಳಲ್ಲ. ಈಗ ಅಧಿಕೃತ. ದಸರಾಗೆ ಒಂದು ಶುಭ ಸುದ್ದಿ ಕೊಡುತ್ತೇನೆ ಎಂದಿದ್ದರು ರಮ್ಯಾ. ಅದೀಗ ಸ್ವಾತಿ ಮುತ್ತಿನ ಮಳೆ ಹನಿಯಾಗಿದೆ.
ರಮ್ಯ ಮತ್ತು ರಾಜ್ ಬಿ.ಶೆಟ್ಟಿ ಜೊತೆ ಎಂದಿನಂತೆ ಅವರ ಟೀಮಿನ ಸದಸ್ಯರಾದ ಮಿಥುನ್ ಮುಕುಂದನ್, ಪ್ರವೀಣ್ ಇರುತ್ತಾರೆ. ನಿರ್ದೇಶನ ರಾಜ್ ಬಿ.ಶೆಟ್ಟರದ್ದು. ನಾಯಕರೂ ಅವರೇ. ನಿರ್ಮಾಣ ರಮ್ಯಾ ಅವರದ್ದೇ. ಜೊತೆಯಲ್ಲಿ ಕಾರ್ತಿಕ್ ಗೌಡ ಸಾಥ್ ನೀಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.