ಕಾಂತಾರ ಕರ್ನಾಟಕದ ಸಿನಿಮಾ ಪ್ರೇಮಿಗಳನ್ನೆಲ್ಲ ಬಡಿದೆಬ್ಬಿಸಿದೆ. ಲವ್, ರೌಡಿಸಂ, ಕಾಮಿಡಿ ಜಾನರ್ ಚಿತ್ರಗಳ ಮಧ್ಯೆ ಬಂದಿರೋ ಕಾಂತಾರ ಇದು ನಮ್ಮ ಸಿನಿಮಾ ಎಂಬ ಭಾವನೆ ಹುಟ್ಟಿಸಿದೆ. ಆ ಪ್ರೀತಿಯೇ ಹೊಸ ದಾಖಲೆ ಬರೆಯುವಂತೆ ಮಾಡುತ್ತಿದೆ. ಕಾಂತಾರ ಕನ್ನಡದ ಮಣ್ಣಿನ ಕಥೆ ಎನ್ನುವುದೇ ಚಿತ್ರದ ಒಂದು ಪ್ಲಸ್ ಪಾಯಿಂಟ್.
ಹೊಂಬಾಳೆ ಫಿಲಮ್ಸ್ ಚಿತ್ರಕ್ಕೆ ಹಾಕಿದ ಬಜೆಟ್ ಸುಮಾರು 16 ಕೋಟಿ. ಚಿತ್ರದ ಆರಂಭದ ಎರಡು ದಿನಗಳಲ್ಲೇ ಚಿತ್ರಕ್ಕೆ ಹಾಕಿದ ಬಂಡವಾಳ ವಾಪಸ್ ಬಂದಿದೆ. ರಿಷಬ್ ಶೆಟ್ಟಿ ಹೀರೋ ಆಗಿ ಮತ್ತು ಡೈರೆಕ್ಟರ್ ಆಗಿ ಗೆದ್ದಿದ್ದಾರೆ. ರಿಷಬ್ ಮತ್ತು ಸಪ್ತಮಿ ತುಂಟಾಟಗಳು, ಕಿಶೋರ್ ಆರ್ಭಟ, ಅಚ್ಯುತ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಎಲ್ಲರದ್ದೂ ಅಮೋಘ ಅಭಿನಯ. ಅಜನೀಶ್ ಲೋಕನಾಥ್ ಸಂಗೀತ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ನೋಡುವುದನ್ನೇ ಬಿಟ್ಟಿದ್ದವರನ್ನೂ ಮತ್ತೆ ಚಿತ್ರಮಂದಿರಕ್ಕೆ ಕರೆತರುತ್ತಿರುವುದು ಕಾಂತಾರ ಹೆಗ್ಗಳಿಕೆ. ಕಾಂತಾರ ಈಗ ಹೊಂಬಾಳೆ ಅಥವಾ ರಿಷಬ್ ಶೆಟ್ಟಿ ಸಿನಿಮಾ ಅಲ್ಲ. ಇದು ನಮ್ಮ ಸಿನಿಮಾ ಎಂಬ ಭಾವನೆ ಮೂಡುವಂತೆ ಮಾಡಿದೆ. ಹೀಗಾಗಿಯೇ ಇನ್ನೊಂದು ವಾರ ಕಾಂತಾರ ಕರ್ನಾಟಕ ಯಾತ್ರೆ ಶುರು ಮಾಡುತ್ತಿದೆ. ನಿಮ್ಮ ಊರಿಗೂ ಬರ್ತಾರೆ..