ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿಯ ಮೊದಲ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಜೂನಿಯರ್. ಮೊದಲ ಚಿತ್ರವೇ ಪ್ಯಾನ್ ಇಂಡಿಯಾ ಎನ್ನುವುದು ವಿಶೇಷ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಲಿದೆ ಕಿರೀಟಿಯ ಜೂನಿಯರ್. ಚಿತ್ರಕ್ಕೆ ಶ್ರೀಲೀಲಾ ನಾಯಕಿ. ರವಿಚಂದ್ರನ್, ಜೆನಿಲಿಯಾ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.
ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಅದ್ದೂರಿಯಾಗಿ ಬರುತ್ತಿರೋ ಚಿತ್ರ ಬಿರುಸಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಇಷ್ಟು ದಿನ ಟೈಟಲ್ ರಿವೀಲ್ ಮಾಡದೇ ಚಿತ್ರೀಕರಣದಲ್ಲಿ ತೊಡಗಿದ್ದ ಚಿತ್ರತಂಡ ಕೊನೆಗೂ ಸಿನಿಮಾ ಟೈಟಲ್ ರಿವೀಲ್ ಮಾಡಿದೆ. ಆ ಮೂಲಕ ಇಷ್ಟು ದಿನದ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ. ನಾಯಕ ನಟ ಕಿರೀಟಿ ಹುಟ್ಟುಹಬ್ಬಕ್ಕೆ ಟೈಟಲ್ ರಿವೀಲ್ ಮಾಡಲು ಸಿದ್ಧವಾಗಿದ್ದ ಚಿತ್ರತಂಡ ಆ ದಿನದಂದೇ ವಾರಾಹಿ ಯೂಟ್ಯೂಬ್ ಚಾನೆಲ್ನಲ್ಲಿ ಟೈಟಲ್ ವೀಡಿಯೋ ಬಿಡುಗಡೆ ಮಾಡಿದೆ.
ಮಾಯಾಬಜಾರ್' ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರವಿದು. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು ಬಿಗ್ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಬಹುದೊಡ್ಡ ಹಾಗೂ ಸ್ಟಾರ್ ತಾರಾಗಣ ಈ ಸಿನಿಮಾದ ಮತ್ತೊಂದು ಹೈಲೈಟ್.