` 75 ರೂಪಾಯ್ ಸೀಕ್ರೆಟ್ : ಈ ದಾಖಲೆ ನೋಡಿದ್ಮೇಲೂ ಟಿಕೆಟ್ ರೇಟ್ ಇಳಿಸೋದಿಲ್ವಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
75 ರೂಪಾಯ್ ಸೀಕ್ರೆಟ್ : ಈ ದಾಖಲೆ ನೋಡಿದ್ಮೇಲೂ ಟಿಕೆಟ್ ರೇಟ್ ಇಳಿಸೋದಿಲ್ವಾ?
75 ರೂಪಾಯ್ ಸೀಕ್ರೆಟ್ : ಈ ದಾಖಲೆ ನೋಡಿದ್ಮೇಲೂ ಟಿಕೆಟ್ ರೇಟ್ ಇಳಿಸೋದಿಲ್ವಾ?

ದಾಖಲೆ 01 : ಮಲ್ಟಿಪ್ಲೆಕ್ಸ್‍ಗಳಿಗೆ ಒಂದೇ ದಿನ 65 ಲಕ್ಷ ಪ್ರೇಕ್ಷಕರು

ದಾಖಲೆ 02 : ಕರ್ನಾಟಕದಲ್ಲಿ ಒಂದೇ ದಿನ 2 ಲಕ್ಷ ಪ್ರೇಕ್ಷಕರು

ದಾಖಲೆ 03 : ವೀಕೆಂಡ್ ಆಗಿರದೇ ಇದ್ದರೂ ಸಿನಿಮಾಗೆ ಪ್ರೇಕ್ಷಕರು ಬಂದಿದ್ದದ್ದು ಆ ಕಾರಣಕ್ಕೆ..

ಇದೆಲ್ಲ ದಾಖಲೆಗಳು ಸೃಷ್ಟಿಯಾಗಿದ್ದು ಶುಕ್ರವಾರ. ಸೆ.23ನೇ ತಾರೀಕು. ವಿಶ್ವ ಸಿನಿಮಾ ದಿನದ ಪ್ರಯುಕ್ತ ಆ ದಿನ ಸಿನಿಮಾ ಟಿಕೆಟ್ ದರ ದೇಶದಾದ್ಯಂತ ಮಲ್ಟಿಪ್ಲೆಕ್ಸುಗಳಲ್ಲಿ 75 ರೂ. ಇತ್ತು.

ಸಾಮಾನ್ಯವಾಗಿ ಸಿನಿಮಾ ಮಂದಿ ಹೇಳುವ ಮಾತು. ಜನ ಥಿಯೇಟರಿಗೇ ಬರ್ತಿಲ್ಲ ಸರ್. ಸಿನಿಮಾ ನೋಡೋದನ್ನೇ ಬಿಟ್ಟು ಬಿಟ್ಟಿದ್ದಾರೆ ಅಂತಾ. ಅದಕ್ಕೆ ಉತ್ತರ 75 ರೂಪಾಯಿನಲ್ಲಿದೆ.

ಸಾಮಾನ್ಯವಾಗಿ ಒಂದು ಆವರೇಜ್ ಸಿನಿಮಾ ಟಿಕೆಟ್ ದರ 400 ರೂ.ಗಳಲ್ಲಿದೆ. ಅದರಲ್ಲೂ ರಿಲೀಸ್ ಟೈಮಲ್ಲಿ. ಅಲ್ಲಿ ಗಂಡ, ಹೆಂಡತಿ ಇಬ್ಬರೇ ಒಂದು ಸಿನಿಮಾಗೆ ಹೋಗಬೇಕೆಂದರೆ ಮಲ್ಟಿಪ್ಲೆಕ್ಸ್‍ನಲ್ಲಿ ಏನೂ ತಿನ್ನದೇ ಇದ್ದರೆ.. ನೀರಷ್ಟೇ ಸಾಕು ಎಂದುಕೊಂಡು ಹೋದರೂ.. ಪಾರ್ಕಿಂಗ್ ಶುಲ್ಕವೂ ಸೇರಿ ಸಾವಿರ ರೂಪಾಯಿ ಆಗುತ್ತೆ. ಇಬ್ಬರು ಮಕ್ಕಳಿದ್ದರೆ.. ಎಲ್ಲರೂ ಮಲ್ಟಿಪ್ಲೆಕ್ಸುಗಳಿಗೆ ಹೋಗಬೇಕೆಂದರೆ.. ಮಿನಿಮಮ್ 3ರಿಂದ 4 ಸಾವಿರ ಕೈಬಿಟ್ಟಿತೆಂದೇ ಲೆಕ್ಕ. ಅಷ್ಟು ದುಡ್ಡಿನಲ್ಲಿ ಟೂವ್ಹೀಲರ್ ಲೋನ್ ಇದ್ದರೆ ಇಎಂಐ ಕಟ್ಟಬಹುದು. ಜನ ಥಿಯೇಟರಿಗೆ ಯಾಕೆ ಬರಬೇಕು? ಸಿಂಗಲ್ ಸ್ಕ್ರೀನ್ ಥಿಯೇಟರುಗಳಲ್ಲೂ ಪರಿಸ್ಥಿತಿ ಬದಲಾಗಿಲ್ಲ. 200 ರೂ.ವರೆಗೂ ಟಿಕೆಟ್ ದರ ಇದೆ.

ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ ಮಲ್ಟಿಪ್ಲೆಕ್ಸುಗಳಲ್ಲಿ ಮಿನಿಮಮ್ ಟಿಕೆಟ್  ದರ ಇದೆ. ಉತ್ತರದಲ್ಲಿ ಆ ನಿಯಮ ಇರೋದು ಚಂಡೀಘಡದಲ್ಲಿ ಮಾತ್ರ. ಮುಂಬೈ, ದೆಹಲಿ ಹಾಗೂ ಬೆಂಗಳೂರಿನಲ್ಲಿ ಸ್ಟಾರ್ ಸಿನಿಮಾ ಬಂತೆಂದರೆ ಮಲ್ಟಿಪ್ಲೆಕ್ಸುಗಳು ಪ್ರೇಕ್ಷಕರ ಲೂಟಿ ಮಾಡಿಬಿಡುತ್ತವೆ. ಅತೀ ಹೆಚ್ಚು ಲೂಟಿಗೊಳಗಾಗೋದು ಕಟ್ಟರ್ ಫ್ಯಾನ್ಸ್.  ತಮ್ಮ ಅಭಿಮಾನದ ನಟ/ನಟಿಯರ ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡಬೇಕೆಂದು ಹೋಗುವವರ ಜೇಬನ್ನು ದುಬಾರಿ ದರಗಳು ಅಕ್ಷರಶಃ ಪಿಕ್‍ಪಾಕೆಟ್ ಮಾಡಿದಂತಿರುತ್ತದೆ.

ಸಿನಿಮಾ ಚೆನ್ನಾಗಿದ್ದರೆ ಓಕೆ. ಅಕಸ್ಮಾತ್.. ಸಿನಿಮಾ ಚೆನ್ನಾಗಿಲ್ಲದಿದ್ದರೆ ಅದರ ಎಫೆಕ್ಟ್ ಮುಂದಿನ ಸಿನಿಮಾಗೆ ಕಾದಿರುತ್ತೆ. ಇತ್ತೀಚೆಗೆ ದೊಡ್ಡ ಮಟ್ಟದ ಸೆನ್ಸೇಷನ್ ಸೃಷ್ಟಿಸುವ ಸಿನಿಮಾಗಳು 2 ಸಾವಿರ ರೂ.ವರೆಗೆ ಟಿಕೆಟ್ ದರ ನಿಗದಿ ಮಾಡಿದ್ದವು. ಅಲ್ಲಿಗೆ.. ಅಂತಾದ್ದೊಂದು ಸಿನಿಮಾ ನೋಡಿದ ಕುಟುಂಬ ಮತ್ತೊಂದಾರು ತಿಂಗಳು ಥಿಯೇಟರ್ ಕಡೆ ತಲೆ ಹಾಕಲ್ಲ.

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಅಬ್ಬರಿಸಿ ಬೊಬ್ಬಿರಿದು 200 ರೂ. ಟಿಕೆಟ್ ಎಂದು ಫಿಕ್ಸ್ ಮಾಡಿದ್ದರು. ಆಮೇಲೆ  ತಣ್ಣಗಾಗಿ ಹೋಗಿದ್ದರು. ಆದರೆ.. ಸಿನಿಮಾ ದಿನದ ಪ್ರೇಕ್ಷಕರ ಪ್ರತಿಕ್ರಿಯೆ ಪ್ರಾಬ್ಲಂ ಇರೋದು ಸಿನಿಮಾ ನೋಡೋವ್ರಲ್ಲಿ ಅಲ್ಲ. ಸಿನಿಮಾ ಮಾಡಿ.. ಅರ್ಜೆಂಟಾಗಿ ದುಡ್ಡು ಮಾಡಿಕೊಳ್ಳಬೇಕು. ಬಾಚಿಕೊಳ್ಳಬೇಕು ಅನ್ನೋ ಲೆಕ್ಕಾಚಾರದಲ್ಲಿ ಅನ್ನೋದನ್ನ ಸಾಬೀತು ಮಾಡಿದೆ.

ಒಂದು ಸಕ್ಸಸ್ ಸಿನಿಮಾ ಇಂಡಸ್ಟ್ರಿಗೆ ಅದೆಷ್ಟು ಉತ್ಸಾಹ ತುಂಬುತ್ತದೋ.. ಅದೇ ರೀತಿ ಆ ಸಕ್ಸಸ್ ಸಿನಿಮಾದ ನಂತರ ಕೆಲವು ಸಿನಿಮಾಗಳಾದರೂ ಖಾಲಿ ಹೊಡೆಯಬೇಕು. ಕಾರಣ ಟಿಕೆಟ್ ರೇಟು. ತೀರಾ.. 75 ರೂ. ಟಿಕೆಟ್ ಅಲ್ಲದೇ ಹೋಗಬಹುದು.  ಪ್ರೇಕ್ಷಕರು ಖುಷಿಯಿಂದ ಬಂದು ಸಿನಿಮಾ ನೋಡಿ ಖುಷಿಯಾಗಿಯೇ ಹೋಗುವಂತ ರೀತಿ ಟಿಕೆಟ್ ರೇಟ್ ಫಿಕ್ಸ್ ಮಾಡಬಹುದು. ಅದು ಇಂಡಸ್ಟ್ರಿಗೂ ಅನುಕೂಲ. ಬಿಸಿನೆಸ್ಸಿಗೂ ಅನುಕೂಲ.