ಗುರು ಶಿಷ್ಯರು ಥಿಯೇಟರುಗಳಲ್ಲಿದೆ. ಮೊದಲಿಗೆ ಗಮನ ಸೆಳೆದಿದ್ದು ಗುರು ಶಿಷ್ಯರು ಚಿತ್ರದ ಟೈಟಲ್. ಅದು ವಿಷ್ಣುವರ್ಧನ್-ಮಂಜುಳಾ-ದ್ವಾರಕೀಶ್ ಸೇರಿದಂತೆ ನವರಸರತ್ನಗಳು ನಟಿಸಿದ್ದ 80ರ ದಶಕದ ಅದ್ಭುತ ಕಾಮಿಡಿ ಸಿನಿಮಾ. ಆ ಟೈಟಲ್ ಇಟ್ಟುಕೊಂಡು ಮಾಡಿದ ಸಿನಿಮಾದಲ್ಲಿರೋದು ಕಾಮಿಡಿ ಕಥೆಯಲ್ಲ.. ಖೋಖೋ ಕಥೆ.
ಅಲ್ಲದೆ ಮಾರ್ಗದರ್ಶಿ ಅನ್ನೋ ಚಿತ್ರದಲ್ಲಿ ಡಾ.ರಾಜ್ ಹಾಡಿದ್ದ ಹಾಡನ್ನು.. ಅದೂ ಕುವೆಂಪು ವಿರಚಿತ ಗೀತೆ ನಡೆ ಮುಂದೆ.. ನಡೆ ಮುಂದೆ.. ಹಾಡನ್ನು ಈ ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ. ಆ ಗೀತೆಗೆ ಹೆಚ್ಚು ಕಡಿಮೆ ಶತಮಾನದ ಇತಿಹಾಸವಿದೆ.
ಚಿತ್ರದಲ್ಲಿ ನಾಯಕ ಶರಣ್. ನಾಯಕಿ ನಿಶ್ವಿಕಾ ನಾಯ್ಡು. ನಿರ್ದೇಶಕ ಜಡೇಶ್ ಕುಮಾರ್ ಹಂಪಿ. ಅಲ್ಲದೆ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಶರಣ್, ನವೀನ್ ಕೃಷ್ಣ, ರವಿಶಂಕರ್ ಗೌಡ, ಬುಲೆಟ್ ಪ್ರಕಾಶ್ ಹಾಗೂ ಶಾಸಕ ರಾಜೂಗೌಡ ಪುತ್ರರು ನಟಿಸಿದ್ದಾರೆ.
ಚಿತ್ರದ ಹಾಡುಗಳು ನಡೆ ಮುಂದೆ.. ನಡೆ ಮುಂದೆ.., ಆಣೆ ಮಾಡಿ ಹೇಳುತೀನಿ ನೀನು ನನ್ನವಳು.. ಹಾಡು ಹಿಟ್ ಆಗಿವೆ. ಆದರೆ.. ಇವೆಲ್ಲವನ್ನೂ ಮೀರಿದ ಇನ್ನಷ್ಟು ಕಾರಣಗಳನ್ನು ಕೊಟ್ಟಿದ್ದಾರೆ ಚಿತ್ರದ ಹೀರೋ ಕಂ ನಿರ್ಮಾಪಕ ಶರಣ್.
ಈ ಚಿತ್ರದಲ್ಲಿ ನಿಮಗೆ ಶರಣ್ ಸಿಗಲ್ಲ. ದೈಹಿಕ ಶಿಕ್ಷಕ ಮನೋಹರ್ ಸಿಗುತ್ತಾರೆ. ಅಷ್ಟರಮಟ್ಟಿಗೆ ಚಿತ್ರದಲ್ಲಿ ಕಥೆಯೇ ಹೀರೋ. ಚಿತ್ರದ ಪಾತ್ರ ಗಂಭೀರವಾದದ್ದು. ಅದರೂ ಕಾಮಿಡಿ ಇದೆ. ಹಾಸ್ಯ ನನ್ನ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿದೆ ಎನ್ನುತ್ತಾರೆ ಶರಣ್.
ಮನೋಹರನನ್ನು ನನ್ನೊಳಗೆ ಇಳಿಸಿದ್ದು ಜಡೇಶ್ ಮತ್ತು ತರುಣ್ ಸುಧೀರ್. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕ್ರೀಡೆಯನ್ನು ಬಳಸಿಕೊಂಡಿದ್ದೇವೆ. ಚಿತ್ರದಲ್ಲಿ ಖೋಖೋಗಾಗಿ ನಾನು ತರಬೇತಿ ಪಡೆದುಕೊಂಡು ನಟಿಸಿದ್ದೇನೆ. ಚಿತ್ರ ನೋಡಿ ಬಂದವರು ಖೋಖೋ ಮತ್ತು ಸಿನಿಮಾ ಎರಡನ್ನೂ ಮೆಚ್ಚಿಕೊಳ್ಳುತ್ತಾರೆ ಎನ್ನುವುದು ಶರಣ್ ನಂಬಿಕೆ.