ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ..
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ..
ಈ ಪದ್ಯವನ್ನು ಬರೆದವರು ಕುವೆಂಪು. ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ ಬ್ರಿಟಿಷರ ಸೆರೆಯಲ್ಲಿ ಸಾವನ್ನಪ್ಪಿದರು. 1929 ಸೆಪ್ಟೆಂಬರ್ 13. ಸತತ 2 ತಿಂಗಳು ಉಪವಾಸ ಸತ್ಯಾಗ್ರಹ ಮಾಡಿ ಜತೀಂದ್ರನಾಥರು ಮೃತಪಟ್ಟ ದಿನ. ಆಗ ಕುವೆಂಪು ಯುವಜನತೆಗೆ ಸ್ಫೂರ್ತಿ ನೀಡಲು ಬರೆದಿದ್ದ ಕವಿತೆ
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ..
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ..
ಈ ಕವಿತೆಯನ್ನು 1969ರಲ್ಲಿ ಮಾರ್ಗದರ್ಶಿ ಅನ್ನೋ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ರಾಜಕುಮಾರ್, ಚಂದ್ರಕಲಾ ನಟಿಸಿದ್ದ ಚಿತ್ರದ ಹಾಡಿಗೆ ಸಂಗೀತ ನೀಡಿದ್ದವರು ಎಂ.ರಂಗರಾವ್. ಹಾಡಿದ್ದವನು ಪಿ.ಬಿ.ಶ್ರೀನಿವಾಸ್. ಇತಿಹಾಸ ಪ್ರಸಿದ್ಧವಾದ ಹಾಡಿನ ಸಾಲುಗಳನ್ನು ನೆನಪಿಸಿಕೊಳ್ಳೋಕೆ ಕಾರಣವಿದೆ. ಈ ಹಾಡಿನ ಅದ್ಭುತ ಸಾಲುಗಳನ್ನಷ್ಟೇ ಹೆಕ್ಕಿಕೊಂಡು ಮತ್ತೊಂದು ಸ್ಫೂರ್ತಿಯ ಗೀತೆ ಹೊರತಂದಿದ್ದಾರೆ ಗುರು ಶಿಷ್ಯರು.
ಆಣೆ ಮಾಡಿ ಹೇಳುತೀನಿ, ಗುರುಗಳು ನಮ್ಮ ಗುರುಗಳು ಎಂಬ ಎರಡು ಹಾಡುಗಳನ್ನು ಹೊರತಂದಿದ್ದ ಗುರು ಶಿಷ್ಯರು ಈಗ ನಡೆ ಮುಂದೆ ನಡೆ ಮುಂದೆ.. ಹಾಡನ್ನು ಹೊರತಂದಿದ್ದಾರೆ. ಚಿತ್ರದಲ್ಲಿ ಖೋಖೋ ಆಟ ಪ್ರಧಾನ ನಾಯಕನಾಗಿದ್ದು ಖೋಖೋ ಮಾಸ್ಟರ್ ಆಗಿ ಶರಣ್ ನಟಿಸಿದ್ದಾರೆ. ತನ್ನ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವಂತೆ ಮಾಡುವ ಈ ಹಾಡು ಪವರ್‍ಫುಲ್ ಆಗಿದೆ. ಕುವೆಂಪು ಸಾಹಿತ್ಯವನ್ನು ಅದೇ ರೀತಿ ಬಳಸಿಕೊಳ್ಳಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರೆ, ಕೈಲಾಶ್ ಖೇರ್ ಧ್ವನಿ ತುಂಬಿದ್ದಾರೆ.
ಶರಣ್, ನಿಶ್ವಿಕಾ ನಾಯ್ಡು, ದತ್ತಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಜಡೇಶ್ ಕೆ ಹಂಪಿ ನಿರ್ದೇಶನವಿದೆ. ತರುಣ್ ಸುಧೀರ್ ಮತ್ತು ಶರಣ್ ಸ್ವತಃ ನಿರ್ಮಾಪಕರಾಗಿರೋ ಚಿತ್ರ ಸೆ.27ಕ್ಕೆ ಬಿಡುಗಡೆಯಾಗುತ್ತಿದೆ.