` ಸಂಪ್ರದಾಯ ಮುರಿದು ಗೆದ್ದ ಪವನ್ ಒಡೆಯರ್ ಡೊಳ್ಳು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಂಪ್ರದಾಯ ಮುರಿದು ಗೆದ್ದ ಪವನ್ ಒಡೆಯರ್ ಡೊಳ್ಳು
Dollu Movie Image

ಡೊಳ್ಳು. ಇದು ಕಮರ್ಷಿಯಲ್ ಸಿನಿಮಾ ಅಲ್ಲ. ರಾಷ್ಟ್ರಪ್ರಶಸ್ತಿ ಗೆದ್ದ ಚಿತ್ರ. ದೇಶ ವಿದೇಶಗಳ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಮತ್ತು ಪ್ರಶಸ್ತಿ ಎರಡನ್ನೂ ಬಾಚಿಕೊಂಡ ಸಿನಿಮಾ. ಇಂಥಾದ್ದೊಂದು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ ಇದ್ಯಾವುದೋ ಕತ್ತಲು ಬೆಳಕಿನ.. ಅರ್ಥವಾಗದ ಭಾರವಾದ ಸಂಭಾಷಣೆಗಳಿರೋ.. ಸ್ಲೋ ಮೋಷನ್ ಸಿನಿಮಾ ಎಂದು ಕೊಂಡಿದ್ದವರೇ ಜಾಸ್ತಿ. ಏಕೆಂದರೆ ಕನ್ನಡದ ಅವಾರ್ಡ್ ಸಿನಿಮಾಗಳ ಹಿಸ್ಟರಿಯೇ ಅಂಥದ್ದು. ಆದರೆ ಅದೆಲ್ಲವನ್ನೂ ಬ್ರೇಕ್ ಮಾಡಿ ಆರ್ಟ್ ಸಿನಿಮಾವನ್ನೂ ಅಚ್ಚುಕಟ್ಟಾಗಿ ಕಮರ್ಷಿಯಲ್ ಚಿತ್ರದಂತೆಯೇ ರೂಪಿಸಿ ತೆರೆಗೆ ತಂದಿರುವುದು ಪವನ್ ಒಡೆಯರ್.

ಡೊಳ್ಳು ಅನ್ನೋ ಕಲೆ. ಆ ಕಲೆಯನ್ನು ದುಡ್ಡಿಗೆ ಮಾರಿಕೊಳ್ಳಬಾರದು ಹಾಗೂ ಪ್ರತಿ ವರ್ಷದ ಊರಿನ ಜಾತ್ರೆಯಲ್ಲಿ ಡೊಳ್ಳು ಕುಣಿತ ಮಾಡಲೇಬೇಕು ಎನ್ನುವ ಅಪ್ಪ. ಅಪ್ಪನ ಆಸೆಯಂತೆ ಡೊಳ್ಳು ಕುಣಿತ ಕಲಿತು ತಂಡ ಕಟ್ಟುವ ನಾಯಕ. ಆದರೆ ನಗರದತ್ತ ಆಕರ್ಷಿತರಾಗುವ ತಂಡದ ಹುಡುಗರು ಜಾತ್ರೆಗೆ ಬಂದು ಕಲೆಗಾಗಿ.. ದೇವರಂತ ಕಲೆಗಾಗಿ ಡೊಳ್ಳು ಕುಣಿತ ಕುಣಿಯುತ್ತಾರಾ..

ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿರುವ ರೀತಿ ಹಾಗೂ ಇಂತಹ ಚಿತ್ರವನ್ನು ಪವನ್ ಒಡೆಯರ್ ಶ್ರೀಮಂತವಾಗಿಯೇ ನಿರ್ಮಾಣ ಮಾಡಿರುವ ರೀತಿ ಗಮನ ಸೆಳೆಯುತ್ತದೆ. ಕಾರ್ತಿಕ್ ನರೇಶ್, ನಿಧಿ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಚಂದ್ರ ಸುರೇಶ್ ನಟನೆ ಗಮನ ಸೆಳೆದಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಜನರ ಗಮನಕ್ಕೆ ಬಾರದೆ ಎಲ್ಲಿಯೋ ಕಳೆದು ಹೋಗುತ್ತಿದ್ದ ಅವಾರ್ಡ್ ಚಿತ್ರಗಳ ಮಧ್ಯೆ ಈ ಚಿತ್ರವನ್ನು ಥಿಯೇಟರಿಗೂ ತಂದು ಪ್ರೇಕ್ಷಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವ ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಗೆದ್ದಿದ್ದಾರೆ. ಹೊಸ ಸಂಪ್ರದಾಯಕ್ಕೆ ಗೆಲುವಾಗಲಿ.