ಯೋಗರಾಜ್ ಭಟ್-ಗಣೇಶ್-ವೈಭವಿ-ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ-ದಿಗಂತ್-ನಿಶ್ವಿಕಾ ನಾಯ್ಡು-ಸಂಯುಕ್ತಾ ಮೆನನ್-ಅನಂತನಾಗ್-ರಮೇಶ್ ರೆಡ್ಡಿ-ಜಯಂತ ಕಾಯ್ಕಿಣಿ-ಅರ್ಜುನ್ ಜನ್ಯಾ ಜೋಡಿಯ ಚಿತ್ರ ಗಾಳಿಪಟ 2. ಈ ವರ್ಷದ ಇನ್ನೊಂದು ಹಿಟ್ ಸಿನಿಮಾ. ಈಗಾಗಲೇ ನಿರ್ಮಾಪಕರನ್ನು ಪಾಸ್ ಮಾಡಿರುವ ಚಿತ್ರ ಇಂದು 3ನೇ ವಾರಕ್ಕೆ ಕಾಲಿಟ್ಟಿದೆ.
ರಿಲೀಸ್ ಆದ ಮಾರನೇ ದಿನದಿಂದಲೇ ಥಿಯೇಟರ್ ಮತ್ತು ಸ್ಕ್ರೀನ್ ಹೆಚ್ಚಿಸಿಕೊಂಡಿದ್ದ ಚಿತ್ರ ಗಾಳಿಪಟ 2. ವಿದೇಶಗಳಲ್ಲಿಯೂ ವ್ಹಾವ್ ಎನ್ನುವ ಶೋ ಕಂಡಿದ್ದ ಗಾಳಿಪಟ 2 ರಾಜ್ಯಾದ್ಯಂತ ಸಕ್ಸಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಯಶಸ್ಸಿನ ಗಾಳಿಪಟ ಹಾರಿಸುತ್ತಿದೆ.
ಕಳೆದ ವಾರ ರಿಲೀಸ್ ಆಗಿದ್ದ ಲವ್ 360 ಗೆಲುವಿನ ಹಾದಿಗೆ ಬಂದಿದೆ. ಮೊದಲ 2 ದಿನ ಚಿತ್ರಕ್ಕೆ ಭರ್ಜರಿ ಎನ್ನುವಂತ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಸಿನಿಮಾ ನೋಡಿದ ಪ್ರೇಕ್ಷಕರೇ ಚಿತ್ರದ ಪ್ರಚಾರದ ರಾಯಭಾರಿಗಳಾಗಿದ್ದು ವಿಶೇಷ. ಶಶಾಂಕ್ ಮತ್ತೊಮ್ಮೆ ಹೊಸಬರೊಂದಿಗೆ ಗೆದ್ದಿದ್ದಾರೆ. ಪ್ರವೀಣ್-ರಚನಾ ಇಂದರ್ ಎಂಬ ಹೊಸ ಪ್ರತಿಭೆಗಳ ಪ್ರೀತಿಗೆ.. ಜಗವೇ ನೀನು ಗೆಳತಿಯೇ ಹಾಡಿಗೆ ಕನ್ನಡಿಗರು ಶರಣಾಗಿದ್ದಾರೆ.
ಅತ್ತ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ವಿಕ್ರಾಂತ್ ರೋಣ ಒಟಿಟಿಗೆ ಬರುತ್ತಿದ್ದು ಸೆಪ್ಟೆಂಬರ್ 2ಕ್ಕೆ ಮನೆ ಮನೆಯಲ್ಲೂ ಸಿಗಲಿದೆ. ಇದರ ಮಧ್ಯೆ ಇನ್ನೂ ಒಂದು ಗುಡ್ ನ್ಯೂಸ್ ಇದೆ.
ಗುರುವಾರ ರಿಲೀಸ್ ಆಗಿರುವ ಪುರಿ ಜಗನ್ನಾಥ್-ವಿಜಯ್ ದೇವರಕೊಂಡ ಜೋಡಿಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಚಿತ್ರಕ್ಕೆ ಪ್ರೇಕ್ಷಕರ ಅಡ್ಡಡ್ಡ ತಲೆ ಆಡಿಸಿಬಿಟ್ಟಿದ್ದಾನೆ. ಹೀಗಾಗಿ ಸಕ್ಸಸ್ ಗ್ಯಾರಂಟಿ ಎನ್ನುವಂತಿದ್ದ ಸಿನಿಮಾ ನಿರೀಕ್ಷೆಯ ಮಟ್ಟ ತಲುಪಿಲ್ಲ. ಲೈಗರ್ ಚಿತ್ರಕ್ಕೆ ಸಿಕ್ಕ ಮಿಕ್ಸೆಡ್ ರೆಸ್ಪಾನ್ಸ್ ಈಗ ಸಖತ್ತಾಗಿವೆ ಅನ್ನಿಸಿಕೊಂಡಿರೋ ಲವ್ 360, ಗಾಳಿಪಟ 2 ಚಿತ್ರಕ್ಕೆ ವರವಾಗಲಿದೆ. ಜೊತೆಗೆ ಧೀರನ್ ರಾಮಕುಮಾರ್ ಆರಂಗೇಟಂ ಸಿನಿಮಾ ಶಿವ 143 ಚಿತ್ರಕ್ಕೆ ಕೂಡಾ ಇದು ಗುಡ್ ನ್ಯೂಸ್.