ಲವ್ 360 ಚಿತ್ರ ಈ ಶುಕ್ರವಾರ ಬಿಡುಗಡೆಯಾಗಿರುವ ಸಿನಿಮಾ. ಶಶಾಂಕ್ ನಿರ್ದೇಶನದ ಲವ್ 360 ಚಿತ್ರದಲ್ಲಿ ನಟಿಸಿರುವುದು ಪ್ರವೀಣ್ ಎಂಬ ಹೊಸ ಹುಡುಗ ಮತ್ತು ಹೆಂಗೆ ನಾವು ಖ್ಯಾತಿಯ ರಚನಾ ಇಂದರ್. ಬಿಡುಗಡೆಗೂ ಮುನ್ನ ಜಗವೇ ನೀನು ಗೆಳತಿಯೇ ಹಾಡು ಸೂಪರ್ ಹಿಟ್ ಎನಿಸಿಕೊಂಡಿತ್ತು. ಚಿತ್ರದ ಹಾಡುಗಳೆಲ್ಲ ಹಿಟ್ ಆಗಿದ್ದವು. ಶಿವಣ್ಣ, ಉಪೇಂದ್ರ, ಸುದೀಪ್ ಚಿತ್ರದ ಹಾಡುಗಳನ್ನು ರಿಲೀಸ್ ಮಾಡಿಕೊಟ್ಟಿದ್ದರು. ಇಷ್ಟೆಲ್ಲ ಆಗಿಯೂ ಚಿತ್ರಕ್ಕೆ ಅಂದುಕೊಂಡಿದ್ದ ಓಪನಿಂಗ್ ಸಿಗಲಿಲ್ಲ. ಚಿತ್ರದ ಬಗ್ಗೆ ಪಾಸಿಟಿವ್ ವಿಮರ್ಶೆಗಳು ಬಂದವಾದರೂ ಪ್ರೇಕ್ಷಕರ ಸಂಖ್ಯೆ ಏರಲಿಲ್ಲ.
ಲವ್ 360 ಚಿತ್ರಕ್ಕೆ ಗಾಳಿಪಟ 2 ಟೀಂ ಬೆಂಬಲ ನೀಡಿರುವುದು ವಿಶೇಷ. ಇದು ಹೊಸಬರ ಚಿತ್ರ. ಈ ಹಿಂದೆಯೂ ನಾನು ಹೊಸಬರೊಂದಿಗೆ ಸಿನಿಮಾ ಮಾಡಿದ್ದಾಗ ಪ್ರೇಕ್ಷಕರು ಕೈ ಹಿಡಿದಿದ್ದರು. ಹೊಸಬರಿದ್ದ ಕಾರಣ ಹೌಸ್‍ಫುಲ್ ನಿರೀಕ್ಷೆ ಇರಲಿಲ್ಲ. ಆದರೆ ಪಿಕಪ್ ಆಗುವ ಭರವಸೆ ಇತ್ತು. ಆದರೆ ವೀರೇಶ್ ಚಿತ್ರಮಂದಿರ ಹೊರತುಪಡಿಸಿದರೆ ಬೇರೆ ಕಡೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬರುತ್ತಿಲ್ಲ. ಹೀಗೇ ಆದರೆ ಥಿಯೇಟರ್ ಕಳೆದುಕೊಳ್ಳುತ್ತೇವೆ. ದಯವಿಟ್ಟು ಒಳ್ಳೆಯ ಚಿತ್ರವನ್ನು ಪ್ರೀತಿಸಿ.. ನೋಡಿ.. ಪ್ರೋತ್ಸಾಹಿಸಿ ಎಂದಿದ್ದಾರೆ ನಿರ್ದೇಶಕ ಶಶಾಂಕ್.
ಚಿತ್ರವನ್ನು ನೋಡಿ ಬಂದ ಪ್ರೇಕ್ಷಕರೇನೋ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷವೆಂದರೆ ಶಶಾಂಕ್ ಚಿತ್ರಕ್ಕೆ ಗಾಳಿಪಟ 2 ಟೀಂ ಬೆಂಬಲ ಮತ್ತು ಬಲ ನೀಡಿರುವುದು. ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ರಮೇಶ್ ರೆಡ್ಡಿ ಸೇರಿದಂತೆ ಇಡೀ ಗಾಳಿಪಟ 2 ಚಿತ್ರತಂಡ ಲವ್ 360 ಸಿನಿಮಾ ನೋಡಿ. ಒಂದೊಳ್ಳೆ ಸಿನಿಮಾ ಸೋಲಬಾರದು. ಗೆಲ್ಲಿಸುವ ಹೊಣೆ ಪ್ರೇಕ್ಷಕರದ್ದು ಎಂದು ಮನವಿ ಮಾಡಿದೆ. ಹಾಗೆ ನೋಡಿದರೆ ಗಾಳಿಪಟ 2ಗೆ ಥಿಯೇಟರುಗಳಲ್ಲಿ ಎದುರಾಳಿ ಲವ್ 360. ಎರಡೂ ಚಿತ್ರಗಳು ಕ್ಲಾಷ್ ಆಗಬಾರದೆಂದು ಮಾತನಾಡಿಕೊಂಡೇ ಒಂದು ವಾರ್ ಗ್ಯಾಪ್ ತೆಗೆದುಕೊಂಡು ರಿಲೀಸ್ ಆದ ಚಿತ್ರಗಳು. ಗಾಳಿಪಟ 2 ಚಿತ್ರದ ಬಗ್ಗೆ ಖುದ್ದು ಶಶಾಂಕ್ ಕೂಡಾ ಪ್ರೀತಿಯ ಮಾತುಗಳನ್ನಾಡಿದ್ದರು. ಈಗ ಗಾಳಿಪಟ 2 ಟೀಂ ಕೂಡಾ ಲವ್ 360 ಚಿತ್ರವನ್ನು ನೋಡಿ ಎಂದು ಮನವಿ ಮಾಡಿದೆ.