Print 
rakshabandan, laal singh chadha,

User Rating: 0 / 5

Star inactiveStar inactiveStar inactiveStar inactiveStar inactive
 
ಥಿಯೇಟರ್ ಬಾಡಿಗೆಯೂ ಹುಟ್ಟಲಿಲ್ಲ : ಲಾಲ್ ಸಿಂಗ್ ಚಡ್ಡಾ, ರಕ್ಷಾಬಂಧನ್ ಢಮಾರ್
RakshaBandhan, Laal Singh Chaddha

ಕಳೆದ ವಾರ ರಿಲೀಸ್ ಆದ ಎರಡು ಬಾಲಿವುಡ್ ಚಿತ್ರಗಳು ಭಯಂಕರ ನಿರೀಕ್ಷೆ ಹುಟ್ಟುಹಾಕಿದ್ದವು. ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಹಾಗೂ ಅಕ್ಷಯ್ ಕುಮಾರ್ ಅಭಿನಯದ ರಕ್ಷಾಬಂಧನ್. ಅಮೀರ್ ಈ ಹಿಂದೆ ಭಾರತ ಸುರಕ್ಷಿತ ರಾಷ್ಟ್ರವಲ್ಲ ಎಂದು ಹೇಳಿದ್ದದ್ದು ಹಾಗೂ ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ಸಿನಿಮಾಗಳಲ್ಲಿ ಟೀಕಿಸಿದ್ದರು. ಇತ್ತ ರಕ್ಷಾಬಂಧನ್ ಚಿತ್ರದ ಕತೆಗಾರ್ತಿ ಹಿಂದೂ ಧರ್ಮದ ನಂಬಿಕೆಗಳನ್ನು ಲೇವಡಿ ಮಾಡಿದ್ದರು. ಹೀಗಾಗಿ ಎರಡೂ ಚಿತ್ರಗಳ ವಿರುದ್ಧ ಬಾಯ್ಕಾಟ್ ಅಭಿಯಾನ ಶುರುವಾಗಿತ್ತು. ಈಗ ಒಂದು ವಾರ ಕಳೆದಿದೆ. ಪಕ್ಕಾ ರಿಸಲ್ಟ್ ಹೊರಬಿದ್ದಿದೆ.

ಮೊದಲ ದಿನ ಲಾಲ್ ಸಿಂಗ್ ಚಡ್ಡಾ 11 ಕೋಟಿ ಬಿಸಿನೆಸ್ ಮಾಡಿದ್ದರೆ, ರಕ್ಷಾ ಬಂಧನ್ 8 ಕೋಟಿ ಕಲೆಕ್ಷನ್ ಗಳಿಸುವಷ್ಟರಲ್ಲಿ ಸುಸ್ತಾಗಿತ್ತು. ಅದಾದ ಮೇಲೆ ಎರಡೂ ಚಿತ್ರಗಳು ಚೇತರಿಸಿಕೊಳ್ಳಲೇ ಇಲ್ಲ. ಲಾಲ್ ಸಿಂಗ್ ಚಡ್ಡಾ ಮತ್ತು ರಕ್ಷಾಬಂಧನ್ ಚಿತ್ರಗಳ ಬಗ್ಗೆ ವಿಮರ್ಶಕರಲ್ಲಿಯೂ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಕೆಲವರು ಅದ್ಭುತ ಎಂದರೆ, ಇನ್ನೂ ಕೆಲವರು ಡಬ್ಬಾ ಎಂದರು.

ಈಗ ವಾರ ಕಳೆಯುವ ಹೊತ್ತಿಗೆ ಲಾಲ್ ಸಿಂಗ್ ಚಡ್ಡಾ 50 ಕೋಟಿ ಬಿಸಿನೆಸ್ ಮಾಡುವಷ್ಟರಲ್ಲಿ ಏದುಸಿರು ಬಿಡುತ್ತಿದ್ದರೆ, ರಕ್ಷಾಬಂಧನ್ 40-45 ಕೋಟಿಯ ಆಸುಪಾಸಿನಲ್ಲಿ ಸುಸ್ತಾಗಿದೆ. ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಕ್ಷಮೆ ಯಾಚಿಸಿದ್ದು ಚಡ್ಡಾಗೆ ವರ್ಕೌಟ್ ಆಗಲಿಲ್ಲ. ಅಕ್ಷಯ್ ಕುಮಾರ್ ಅವರಿಗೆ ಇರೋ ಇಮೇಜ್ ರಕ್ಷಾಬಂಧನ್‍ಗೆ ಮ್ಯಾಜಿಕ್ ಮಾಡಲಿಲ್ಲ.

ಸಿನಿಮಾ ವಾರದ ಕೊನೆಯ ದಿನ ಲಾಲ್ ಸಿಂಗ್ ಚಡ್ಡಾ 1.5 ಕೋಟಿ ಗಳಿಸಿದೆ. ರಕ್ಷಾಬಂಧನ್ ಕೂಡಾ 1 ಕೋಟಿ ತಲುಪೋಕೂ ತಿಣುಕಿದೆ. ಎರಡೂ ಚಿತ್ರಗಳು ಪ್ರದರ್ಶನವಾಗುತ್ತಿರೋ ಸ್ಕ್ರೀನ್ ಮತ್ತು ಥಿಯೇಟರುಗಳ ಲೆಕ್ಕ ಗಣನೆಗೆ ತೆಗೆದುಕೊಂಡರೆ ಬಾಡಿಗೆಯೂ ಹುಟ್ಟದಂತಾ ಪರಿಸ್ಥಿತಿ. ಸರಾಸರಿ ಪ್ರಕಾರ ಎರಡೂ ಚಿತ್ರತಂಡಗಳಿಗೆ ಸಿಗುವುದು ಒಂದೊಂದು ಶೋನಿಂದ 3 ಸಾವಿರ ಚಿಲ್ಲರೆ ಹಣವಷ್ಟೆ. ಹೀಗಾಗಿ ಸಿನಿಮಾ ವಾರದ 2ನೇ ವಾರವೇ ಎರಡೂ ಚಿತ್ರಗಳ ಸ್ಕ್ರೀನ್‍ಗಳ ಸಂಖ್ಯೆ ಶೇ.85ರಷ್ಟು ಕಡಿಮೆಯಾಗಿವೆ. ಈಗ ಮತ್ತೊಮ್ಮೆ ವೀಕೆಂಡ್ ಇದ್ದರೂ, ರಜಾ ಇದ್ದರೂ ಚೇತರಿಸಿಕೊಳ್ಳೋ ಯಾವುದೇ ಸೂಚನೆಗಳೂ ಇಲ್ಲ.

ಇದರ ಮಧ್ಯೆ ಕನ್ನಡದಲ್ಲಿ ಗಾಳಿಪಟ 2 ಬೊಂಬಾಟ್ ಆಗಿ ಗೆದ್ದಿದೆ. ತೆಲುಗಿನಲ್ಲಿ ಸೀತಾರಾಮನ್ ಹಾಗೂ ಕಾರ್ತಿಕೇಯ 2 ಚಿತ್ರಗಳು ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿವೆ. ತಮಿಳಿನಲ್ಲಿ ಧನುಷ್ ಚಿತ್ರ ಮೋಡಿ ಮಾಡುತ್ತಿದೆ.