ಕನ್ನಡ ಚಿತ್ರರಂಗಕ್ಕೆ ಪ್ರಶಾಂತ್ ನೀಲ್ ಎಂಬ ವಿಭಿನ್ನ ನಿರ್ದೇಶಕನ ಪರಿಚಯ ಮಾಡಿಸಿದ ಸಿನಿಮಾ ಉಗ್ರಂ. ಶ್ರೀಮುರಳಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಸಿನಿಮಾನೂ ಹೌದು. ಈ ಸಿನಿಮಾ ಈಗ ಮರಾಠಿಗೆ ಹೋಗುತ್ತಿದೆ. ಕೆಜಿಎಫ್ ನಂತರ ರಾಷ್ಟ್ರಮಟ್ಟದ ನಿರ್ದೇಶಕನ ಪಟ್ಟಕ್ಕೇರಿದವರು ಪ್ರಶಾಂತ್ ನೀಲ್. ಹೀಗಾಗಿಯೇ ಉಗ್ರಂ ಕಡೆ ಬೇರೆ ಚಿತ್ರರಂಗಗಳು ತಿರುಗಿ ನೋಡಿದ್ದು. ಮರಾಠಿಯಲ್ಲಿ ಉಗ್ರಂ ಚಿತ್ರದ ಹೆಸರು ರಾಂತಿ.
ಶಾನ್ವಿ ಕಾಶಿಯ ಹುಡುಗಿಯಾದರೂ, ಮುಂಬೈನವರೇ. ಕನ್ನಡ ಚಿತ್ರರಂಗದಿಂದಲೇ ಹೆಚ್ಚು ಗುರುತಿಸಿಕೊಂಡ ಶಾನ್ವಿ, ಕನ್ನಡದಲ್ಲಿ ಹರಿಪ್ರಿಯಾ ಮಾಡಿದ್ದ ಪಾತ್ರವನ್ನು ಮರಾಠಿಯಲ್ಲಿ ಮಾಡುತ್ತಿದ್ದಾರೆ. ಶ್ರೀಮುರಳಿ ಪಾತ್ರದಲ್ಲಿ ಶರದ್ ಖೇಳ್ಕರ್ ನಟಿಸುತ್ತಿದ್ದಾರೆ. ನಿರ್ದೇಶನದ ಹೊಣೆ ಹೊತ್ತಿರೋದು ಸಮಿತ್ ಕಕ್ಕಡ್.
ಕನ್ನಡ, ತೆಲುಗು, ಮಲಯಾಳಂ ಹಾಗೂ ಚೈನೀಸ್ ಭಾಷೆಯ ಚಿತ್ರದಲ್ಲಿ ನಟಿಸಿರುವ ನನಗೆ ಮರಾಠಿ ಚಿತ್ರರಂಗ ಹೊಸ ಅನುಭವ. ಈ ವರ್ಷದಲ್ಲಿಯೇ ತಮಿಳು ಹಾಗೂ ಹಿಂದಿಗೂ ಹೋಗುತ್ತಿದ್ದೇನೆ. ಕನ್ನಡದಲ್ಲಿ ಹರಿಪ್ರಿಯಾ ಮಾಡಿದ್ದ ಪಾತ್ರವೇ ನನ್ನದು. ಸ್ವಲ್ಪ ಬದಲಾವಣೆ ಮಾಡಿದ್ದಾರೆ ಎಂದಿದ್ದಾರೆ ಶಾನ್ವಿ.