ಪವನ್ ಕುಮಾರ್. ಲೂಸಿಯಾ ಪವನ್ ಎಂದೇ ಗುರುತಿಸಿಕೊಂಡ ಡೈರೆಕ್ಟರ್. ಪಕ್ಕದ ರಾಜ್ಯಗಳಿಗೆ ಕಾಲಿಟ್ಟರೆ ಯುಟರ್ನ್ ಪವನ್ ಎಂದೇ ಗುರುತಿಸ್ತಾರೆ. ಲೈಫು ಇಷ್ಟೇನೇ ಚಿತ್ರದಿಂದ ನಿರ್ದೇಶಕರಾದ ಪವನ್ ಈಗ ಹೀರೋ ಆಗಿದ್ದಾರೆ. ಹಾಗಂತ ಪವನ್ ಸಿನಿಮಾವನ್ನೇ ಓದಿದ್ದು ಎಂದು ಕೊಳ್ಳಬೇಡಿ. ಓದಿದ್ದು ಎಂಜಿನಿಯರಿಂಗ್. ಬಂದಿದ್ದು ಸಿನಿಮಾಗೆ.
20 ವರ್ಷಗಳ ಹಿಂದೆ ಎಂಜಿನಿಯರಿಂಗ್`ಗೆ ಗುಡ್ ಬೈ ಹೇಳಿ ರಂಗಭೂಮಿಗೆ ಬಂದೆ. ಹೊಸ ರಂಗಪ್ರಯೋಗಗಳಿಗೆ ಎಂಟ್ರಿ ಕೊಟ್ಟೆ. ಟಿಪಿಕಲ್ ಭಾರತೀಯ ಸಿನಿಮಾಗಳಿಗಿಂತ ಆಚೆಗಿನ ವಿಶ್ವ ಸಿನಿಮಾ ಸೆಳೆಯುತ್ತಾ ಹೋಯ್ತು.. ಹೀಗೆ ಹೇಳುತ್ತಾ ಹೋಗುವ ಪವನ್ ಅವರು ನಿರ್ದೇಶಿಸಿದ ಲೈಫು ಇಷ್ಟೇನೆ, ಲೂಸಿಯಾ, ಯು ಟರ್ನ್ ಚಿತ್ರಗಳು ರೆಗ್ಯುಲರ್ ಸಿನಿಮಾಗಳಂತೂ ಆಗಿರಲಿಲ್ಲ. ಟಿಪಿಕಲ್ ಶೈಲಿಯನ್ನು ಬ್ರೇಕ್ ಮಾಡಿದ್ದ ಚಿತ್ರಗಳೇ. ಹಾಗೆ ಬ್ರೇಕ್ ಮಾಡಿಯ ಗೆದ್ದ ಚಿತ್ರಗಳು.
ಅಂದಹಾಗೆ ಪವನ್ ಅವರು ಮೊದಲು ತೆರೆ ಮೇಲೆ ಕಾಣಿಸಿಕೊಂಡಿದ್ದು ವಾಸ್ನೆ ಬಾಬು ಪಾತ್ರದಲ್ಲಿ. ಅದು ಸೂರಿಯವರ ಇಂತಿ ನಿನ್ನ ಪ್ರೀತಿಯ ಸಿನಿಮಾ. ಇಷ್ಟವಿಲ್ಲದಿದ್ದರೂ ಆ ಪಾತ್ರ ಮಾಡಿದ್ದರಂತೆ. ಸೂರಿಯವರ ಜೊತೆಗಿದ್ದಾಗ ಸಹಜವಾಗಿಯೇ ಯೋಗರಾಜ್ ಭಟ್ಟರ ಪರಿಚಯವಾಯ್ತು. ಅವರ ಜೊತೆ ಪಂಚರಂಗಿ, ಮನಸಾರೆ ಚಿತ್ರಗಳಿಗೆ ಬರಹಗಾರನಾಗಿ ಕೆಲಸ ಮಾಡಿದ ಪವನ್.. ಈಗ ಅವರದ್ದೇ ಚಿತ್ರ ಗಾಳಿಪಟ 2 ಮೂಲಕ ಹೀರೋ ಕೂಡಾ ಆಗಿದ್ದಾರೆ.
ಇದು ಶುರುವಾಗಿದ್ದು 2018ರಲ್ಲಿ. ಆಗ ಯೋಗರಾಜ್ ಭಟ್ರು ಫೋನ್ ಮಾಡಿ ನನ್ನದೊಂದು ಫೋಟೋ ಕೇಳಿದ್ರು. ಹೆಂಗೆಂಗೋ ಇದ್ದ. ಅವರಿಗೆ ಅಂತದ್ದೇ ವ್ಯಕ್ತಿ ಬೇಕಿತ್ತು. ನಂತರ ನಾನು ಥಾಯ್ಲೆಂಡ್`ಗೆ ಹೋಗಿ ಮಯ್‍ಥಾಯ್ ಕಲಿತು 6 ವಾರಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡೆ. 20 ವರ್ಷಗಳ ಹಿಂದೆ ಹೇಗಿದ್ದೆನೋ.. ಅಷ್ಟು ಚಿಕ್ಕವನಾದೆ ಎನ್ನುತ್ತಾರೆ ಪವನ್.
ಚಿತ್ರದಲ್ಲಿ ಗಣೇಶ್ ಮತ್ತು ದಿಗಂತ್ ಇದ್ದರೂ ಪವನ್-ಶರ್ಮಿಳಾ ಜೋಡಿಯ ರೊಮ್ಯಾನ್ಸ್ ಸದ್ದು ಮಾಡುತ್ತಿದೆ. ರೋಮಾಂಚನ ಹುಟ್ಟಿಸುತ್ತಿದೆ. ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2 ಆಗಸ್ಟ್ 12ಕ್ಕೆ ರಿಲೀಸ್ ಆಗಲಿದೆ.