ವಿಕ್ರಾಂತ್ ರೋಣ ಚಿತ್ರ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿದೆ. 150 ಕೋಟಿ ಕ್ಲಬ್ ಸೇರೋಕೆ ದಾಪುಗಾಲಿಡುತ್ತಿದೆ. ಕಿಚ್ಚ ಸುದೀಪ್ ಕೆರಿಯರ್‍ನಲ್ಲಿ ಇದು ಬೇರೆಯದೇ ಸಿನಿಮಾ. ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು.. ಎಲ್ಲರೂ ಗೆದ್ದಿದ್ದಾರೆ. ಆದರೆ.. ವಿವಾದಗಳೇ ಮುಗಿಯುವಂತೆ ಕಾಣುತ್ತಿಲ್ಲ.
ಆರಂಭದಲ್ಲಿ ಕೆಲವರು ಚಿತ್ರವೇ ಚೆನ್ನಾಗಿಲ್ಲ ಎಂದರು. ಪ್ರೇಕ್ಷಕರು ಮತ್ತೆ ಮತ್ತೆ ಬಂದು ನೋಡಿ ಅದನ್ನು ಸುಳ್ಳು ಮಾಡಿದರು.
ರಂಗಿತರಂಗ ಪಾರ್ಟ್ 2 ಎಂದರು. ಹಾಗೆ ಹೇಳಿದವರಿಗೆ ಪ್ರೇಕ್ಷಕರೇ ಏನಿವಾಗ.. ಸಿನಿಮಾ ಚೆನ್ನಾಗಿದ್ಯಲ್ಲ ಎಂದರು.
ಸುದೀಪ್ ಅವರಿಗೆ ಸ್ಟಾರ್`ಗಿರಿಗೆ ತಕ್ಕಂತೆ ಬಿಲ್ಡಪ್ ಇಲ್ಲ ಎಂದಾಗ ಸ್ವತಃ ಸುದೀಪ್ ಇನ್ನೂ ಎಷ್ಟು ದಿನ ಅದನ್ನೇ ಮಾಡೋದು. ಮುಂದಿನ ಸಿನಿಮಾ ಹಾಗೆಯೇ ಮಾಡೋಣ ಬಿಡಿ ಎಂದು ತೇಲಿಸಿಬಿಟ್ಟರು. ಇದರ ಮಧ್ಯೆ ಸ್ಟಾರ್ ಡಮ್ ಪಕ್ಕಕ್ಕಿಟ್ಟು ನಟಿಸಿದ ಸುದೀಪ್ ಹೊಸ ವರ್ಗದ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡರು.
ಕನ್ನಡ ಹಿಂದಿ ವಿವಾದ, ಬುರ್ಜ್ ಖಲೀಫಾ ಮೇಲೆ ಬೇಕಿತ್ತಾ ಎಂಬಂತಹ ಚಿತ್ರ ವಿಚಿತ್ರ ವಿವಾದಗಳನ್ನು ಸೃಷ್ಟಿಸಿದವರಿಗೀಗ ಹೊಸ ವಿವಾದ ಕಣ್ಣಿಗೆ ಕಂಡಿದೆ.
ಚಿತ್ರದಲ್ಲಿ ದಲಿತರನ್ನು ಕ್ರೂರಿಗಳಂತೆ ಪಿಶಾಚಿಗಳಂತೆ ತೋರಿಸಲಾಗಿದೆಯಂತೆ. ಮುಸ್ಲಿಮರನ್ನು ಅದದೇ ರೀತಿಯಲ್ಲಿ ತೋರಿಸಲಾಗಿದೆಯಂತೆ. ಸಿನಿಮಾ ಟೆಕ್ನಿಕಲಿ ಚೆನ್ನಾಗಿದೆ. ಪರ್ಫಾಮೆನ್ಸ್ ಕೂಡಾ ಚೆನ್ನಾಗಿದೆ. ಆದರೆ, ಇಂತಹ ಸೂಕ್ಷ್ಮಗಳನ್ನು ಜಾತಿ/ಧರ್ಮಗಳನ್ನು ಸೂಕ್ಷ್ಮವಾಗಿ ಚಿತ್ರಿಸಬೇಕಿತ್ತು ಎಂದಿದ್ದಾರೆ ನಟ ಚೇತನ್.
ಆ ದಿನಗಳು ಖ್ಯಾತಿಯ ಚೇತನ್ ಅವರ ಈ ಟೀಕೆಗೆ ಪರ ವಿರೋಧ ಟೀಕೆಗಳಿವೆ. ಕೆಲವರು ಚೇತನ್ ಅವರನ್ನು ಬೆಂಬಲಿಸಿದ್ದರೆ, ಇನ್ನೂ ಕೆಲವರು ಸ್ವತಃ ಚೇತನ್ ಮಾಡಿರೋದು ರೌಡಿಗಳ ಕಥೆಗಳನ್ನು. ಇಂತಹ ಚೇತನ್ ಸೂಕ್ಷ್ಮತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟಕ್ಕೂ ವಿಕ್ರಾಂತ್ ರೋಣ ಕಾಲ್ಪನಿಕ ಕಥೆ. ಇಲ್ಲದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಬುದ್ದಿ ಹೇಳಿದ್ದಾರೆ.