ಪ್ರಣಯರಾಜ ಶ್ರೀನಾಥ್ ಚಿತ್ರರಂಗದ ಸೀನಿಯರ್ ಕಲಾವಿದ. ನಾಯಕರಾಗಿ, ಪೋಷಕ ನಟರಾಗಿ.. ತಮ್ಮದೇ ಛಾಪು ಮೂಡಿಸಿರುವ ಕಲಾವಿದ. ಪುಟ್ಟಣ್ಣ ಕಣಗಾಲರ ಶಿಷ್ಯ. ವೃತ್ತಿ ಜೀವನದಲ್ಲಿ ಹಲವು ದೊಡ್ಡ ದೊಡ್ಡ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಈ ನಟ ಯೋಗರಾಜ್ ಭಟ್ ಅವರ ಒಂದು ಕರೆಗಾಗಿ ಕಾಯುತ್ತಿದ್ದರಂತೆ.
ನಾನು ಮುಂಗಾರು ಮಳೆ ನೋಡಿದ ದಿನದಿಂದ ಕಾಯುತ್ತಿದ್ದೆ. ಯೋಗರಾಜ್ ಭಟ್ ಅವರ ಜೊತೆ ಕೆಲಸ ಮಾಡಬೇಕು ಎಂಬ ಆಸೆಯೊಂದು ಒಳಗೊಳಗೇ ಮೂಡಿತ್ತು. ಗಾಳಿಪಟ 2 ಚಿತ್ರದಲ್ಲಿ ನನ್ನದು ಅತಿಥಿ ನಟನ ಪಾತ್ರ. ಕಾಲೇಜ್ ಪ್ರಿನ್ಸಿಪಾಲ್ ಕ್ಯಾರೆಕ್ಟರ್. ಆದರೇನಂತೆ.. ಯೋಗರಾಜ್ ಭಟ್ ಅವರ ಒಂದು ಕರೆಗಾಗಿ ಕಾಯುತ್ತಿದ್ದವನಿಗೆ ಪಾತ್ರ ಯಾವುದಾದರೇನು? ಎರಡು ದಿನದ ಶೆಡ್ಯೂಲ್ ಇತ್ತು. ಯೋಗರಾಜ್ ಭಟ್ ಅವರಿಂದ ಹಲವು ಹೊಸತು ಕಲಿತೆ ಎಂದಿದ್ದಾರೆ ಶ್ರೀನಾಥ್.
ಗಾಳಿಪಟ 2, ಒಂದು ರೀತಿಯಲ್ಲಿ ಶ್ರೀನಾಥ್ ಅವರಿಗೆ ಕಮ್ ಬ್ಯಾಕ್ ಸಿನಿಮಾ. ಇತ್ತೀಚೆಗೆ ಅವರು ನಟನೆಯಿಂದ ದೂರವೇ ಉಳಿದಿದ್ದರು. ನನಗೇನೂ ವಯಸ್ಸಾಗಿಲ್ಲ. ನಟಿಸುವ ಶಕ್ತಿಯೂ ಇದೆ. ಮೆಮೊರಿ ಪವರ್ ಕೂಡಾ ಚೆನ್ನಾಗಿದೆ. ಗಾಳಿಪಟ 2 ನಂತರ ಹೊಸ ಹೊಸ ಅವಕಾಶಗಳು ಬರಬಹುದು ಎನ್ನುತ್ತಾರೆ ಶ್ರೀನಾಥ್.
ಅಷ್ಟು ಹಿರಿಯ ಕಲಾವಿದನಾಗಿ ನಿರ್ದೇಶಕರನ್ನು ಹೊಗಳುವುದು ಅವರ ದೊಡ್ಡತನ. ಅಷ್ಟು ಹಿರಿಯ ಕಲಾವಿದರೊಬ್ಬರು ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಟಿಸುವುದಕ್ಕಾಗಿ ಕಾದಿದ್ದರು ಎನ್ನುವುದು ಯೋಗರಾಜ್ ಭಟ್ ಅವರ ಕಿರೀಟಕ್ಕೆ ಸಿಕ್ಕ ಗರಿ. ಸದ್ಯಕ್ಕೆ ಎಲ್ಲರೂ ಗಾಳಿಪಟ 2 ಎದುರು ನೋಡುತ್ತಿದ್ದಾರೆ.
ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2 ಇದೇ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಗಣೇಶ್ ಮತ್ತು ಭಟ್ಟರು 4ನೇ ಬಾರಿಗೆ ಒಂದುಗೂಡಿರುವ ಚಿತ್ರ ಗಾಳಿಪಟ 2. ಗಾಳಿಪಟದಲ್ಲಿದ್ದ ದಿಗಂತ್, ಅನಂತ್ ನಾಗ್, ಪದ್ಮಜಾ ರಾವ್, ರಂಗಾಯಣ ರಘು, ಜಯಂತ ಕಾಯ್ಕಿಣಿ, ಸೋನು ನಿಗಮ್ ಎಲ್ಲರೂ ಈ ಗಾಳಿಪಟ 2ನಲ್ಲೂ ಇದ್ದಾರೆ.