ವರ್ಷದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕೆಜಿಎಫ್ ಚಾಪ್ಟರ್ 2. ನಂತರದ ಸ್ಥಾನದಲ್ಲಿರೋದು ಆರ್.ಆರ್.ಆರ್. ನಂತರದ ಸ್ಥಾನದಲ್ಲಿ ಪುಷ್ಪ ಚಿತ್ರವಿದೆ. ಮುಂದಿನ ಲಿಸ್ಟಿನಲ್ಲಿ ಹಿಂದಿಯ ಭೂಲ್‍ಬುಲಯ್ಯ, ತಮಿಳಿನ ವಿಕ್ರಂ.. ಹೀಗೆ ಇನ್ನೂ ಹಲವು ಚಿತ್ರಗಳಿವೆ. ಆದರೆ.. ಈಗ ಹೇಳ್ತಿರೋದು ಬೇರೆಯದೇ ಸ್ಟೋರಿ. ಇದು ಹಾಕಿದ ಬಂಡವಾಳ ಮತ್ತು ಪಡೆದ ಲಾಭ ಎರಡನ್ನೂ ಲೆಕ್ಕ ಹಾಕಿ, ಎಷ್ಟು ಪಟ್ಟು ಲಾಭ ಬಂತು ಅನ್ನೋ ಸ್ಟೋರಿ.
ಹಾಗೆ ನೋಡಿದರೆ ಕೆಜಿಎಫ್ ಚಾಪ್ಟರ್ 2, ಆರ್.ಆರ್.ಆರ್. ಹಾಗೂ ಪುಷ್ಪ ಚಿತ್ರಗಳು ದೊಡ್ಡ ಮಟ್ಟದ ಲಾಭ ಮಾಡಿದರೂ.. ಹಾಕಿದ್ದ ಬಂಡವಾಳವೂ ಅಷ್ಟೇ ಹೆಚ್ಚು. ಹೀಗಾಗಿ ಈ ಲೆಕ್ಕಾಚಾರ ಬೇರೆಯದೇ ಇದೆ.
ಕಡಿಮೆ ಬಂಡವಾಳದಲ್ಲಿ ನಿರ್ಮಿಸಿ ಅತೀ ಹೆಚ್ಚು ಲಾಭ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರೋದು ಕಾಶ್ಮೀರ್ ಫೈಲ್ಸ್. ಏಕೆಂದರೆ ಈ ಚಿತ್ರಕ್ಕೆ ಹಾಕಿದ್ದ ಬಂಡವಾಳ ಕೇವಲ 20 ಕೋಟಿ. ಆದರೆ ಸಿನಿಮಾ ಗಳಿಸಿದ್ದು 350 ಕೋಟಿ. ಅಲ್ಲಿಗೆ 17 ಪಟ್ಟು ಹೆಚ್ಚು ಲಾಭ. ತೆರಿಗೆ ವಿನಾಯಿತಿ ಪಡೆದ ಚಿತ್ರವಾದ ಕಾರಣ ಟಿಕೆಟ್ ದರ ಹೆಚ್ಚಿಸಲು ಸಾಧ್ಯವಿರಲಿಲ್ಲ. ಹೀಗಿದ್ದರೂ ಅತೀ ಹೆಚ್ಚು ಲಾಭ ಪಡೆದ ಚಿತ್ರ ಕಾಶ್ಮೀರ್ ಫೈಲ್ಸ್. ಜೊತೆಗೆ ಚಿತ್ರಕ್ಕೆ ಹಿಂದೂಗಳಲ್ಲಿ ವ್ಯಕ್ತವಾದ ಜಾಗೃತಿ ಹಾಗೂ ಈ ಇತಿಹಾಸವನ್ನು ಮುಚ್ಚಿಡಲಾಗಿತ್ತು ಎಂಬ ವಿಷಯಗಳು ಚಿತ್ರಕ್ಕೆ ದೊಡ್ಡ ಮಟ್ಟದ ಮಾರ್ಕೆಟ್ ಸೃಷ್ಟಿಸಿದವು.
ನಂ.2 ಸ್ಥಾನದಲ್ಲಿರೋದು ಕೆಜಿಎಫ್ ಚಾಪ್ಟರ್ 2. ಚಿತ್ರಕ್ಕೆ ತೊಡಗಿಸಿದ್ದ ಬಂಡವಾಳವೂ ಹೆಚ್ಚು. ಆದರೆ ಚಿತ್ರ ಹಿಮಾಲಯದೆತ್ತರಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ತೋರಿಸಿದ ಕಾರಣ ಸಿನಿಮಾ ಲಾಭದ ಲೆಕ್ಕದಲ್ಲಿ ನಂ.2 ಸ್ಥಾನದಲ್ಲಿದೆ. 100 ಕೋಟಿ ಬಜೆಟ್‍ನಲ್ಲಿ ಸಿದ್ಧವಾದ ಚಿತ್ರ 1250 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿತು.
ನಂ.3 ಸ್ಥಾನದಲ್ಲಿರೋದು ಮಲಯಾಳಂ ಸಿನಿಮಾ ಹೃದಯಂ. 7 ಕೋಟಿಯಲ್ಲಿ ತಯಾರಾದ ಸಿನಿಮಾ ಗಳಿಸಿದ್ದು 54 ಕೋಟಿ.
4ನೇ ಸ್ಥಾನದಲ್ಲಿ ಮತ್ತೊಮ್ಮೆ ಕನ್ನಡ ಸಿನಿಮಾನೇ ಇದೆ. 777 ಚಾರ್ಲಿ ಸಿನಿಮಾ 20 ಕೋಟಿಯಲ್ಲಿ ತಯಾರಾದ ಸಿನಿಮಾ. ಗಳಿಸಿದ್ದು ಹತ್ತಿರ ಹತ್ತಿರ 150 ಕೋಟಿ.
ಈಗ ವಿಕ್ರಾಂತ್ ರೋಣ ಹಿಟ್ ಆಗಿದೆ. ಈ ಚಿತ್ರವೂ ಇದೇ ಲಿಸ್ಟಿಗೆ ಸೇರಲಿದೆಯಾ..? ವೇಯ್ಟ್ ಮಾಡಬೇಕು. ವಿಕ್ರಾಂತ್ ರೋಣನ ವಿಕ್ಟರಿ ಈಗಿನ್ನೂ ಶುರುವಾಗಿದೆ.