ವಿಕ್ರಾಂತ್ ರೋಣ. ಕನ್ನಡದ ಸಿನಿಮಾ. ಹಲವು ಭಾಷೆಗಳಲ್ಲಿ ಡಬ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ. ಸುದೀಪ್, ನೀತಾ ಜೋಸೆಫ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ಸಿನಿಮಾ ರಿಲೀಸ್ ಆಗುವುದು ಜುಲೈ ಕೊನೆ ವಾರ. ವಿಕ್ರಾಂತ್ ರೋಣ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್ನಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದರ ಜೊತೆಯಲ್ಲೇ ನೀವು ನಿಮ್ಮದೇ ಭಾಷೆಯಲ್ಲಿ ಸಿನಿಮಾ ನೋಡುವ ಹೊಸ ಟೆಕ್ನಾಲಜಿಯೂ ಈ ಚಿತ್ರದ ಮೂಲಕ ಪರಿಚಯವಾಗುತ್ತಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ.
ಸಿನಿ ಡಬ್ ಆ್ಯಪ್. ಇದರ ಮೂಲಕ ನೀವು ನಿಮಗಿಷ್ಟವಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ನೀವು ಹಿಂದಿ ವಿಕ್ರಾಂತ್ ರೋಣ ಥಿಯೇಟರಿನಲ್ಲಿ ಕುಳಿತಿದ್ದೀರಿ ಎಂದುಕೊಳ್ಳಿ. ಆದರೆ ನಿಮಗೆ ಹಿಂದಿ ಗೊತ್ತಿಲ್ಲ. ಕನ್ನಡದಲ್ಲಿಯೇ ನೋಡಬೇಕು ಎಂದುಕೊಳ್ಳುತ್ತೀರಿ. ಆಗ ಈ ಸಿನಿ ಡಬ್ ಆ್ಯಪ್ ಮೂಲಕ ನೀವು ಸಿನಿಮಾವನ್ನು ಕನ್ನಡದಲ್ಲಿಯೇ ಕೇಳಬಹುದು. ಈ ಆ್ಯಪ್ ಇದ್ದರೆ ಅದು ನೀವು ಥಿಯೇಟರಿನಲ್ಲಿ ಇರುವ ಟೈಂ ನೋಡಿಕೊಂಡು ಆಪರೇಟ್ ಆಗುತ್ತೆ. ಪೈರಸಿಯಲ್ಲಿ ಆಗಲ್ಲ. ಇದು ನಮ್ಮ ತಂಡದ ಕೆಲಸ ಎಂದು ಇಡೀ ತಂಡದ ಬೆನ್ನು ತಟ್ಟಿದ್ದಾರೆ ಕಿಚ್ಚ ಸುದೀಪ್.
ಅಂದಹಾಗೆ ಇಂಥಾದ್ದೊಂದು ವ್ಯವಸ್ಥೆ ವಿಶ್ವಸಂಸ್ಥೆಯಲ್ಲಿದೆ. ಅಲ್ಲಿ ಬೇರೆ ಬೇರೆ ದೇಶಗಳ ಪ್ರತಿನಿಧಿಗಳು ತಮ್ಮ ತಮ್ಮ ಭಾಷೆಯಲ್ಲಿ ಮಾತನಾಡಿದರೂ, ಅಲ್ಲಿರೋ ಟೆಕ್ನಾಲಜಿ ಬಳಸಿಕೊಂಡು ತಕ್ಷಣವೇ ಅದು ಅನುವಾದಗೊಂಡು.. ನಿಮಗಿಷ್ಟವಾದ ಭಾಷೆಯಲ್ಲಿ ಕೇಳುವಂತ ವ್ಯವಸ್ಥೆ ಇದೆ. ಕೆಲವು ಕಾರ್ಪೊರೇಟ್ ಕಂಪೆನಿಗಳು ಇದನ್ನು ಈಗಾಗಲೇ ಅಳವಡಿಸಿಕೊಂಡಿವೆ. ಇದನ್ನು ಸಿನಿಮಾದಲ್ಲೂ ಬಳಸಬಹುದು ಅನ್ನೋದು ಕಲ್ಪನೆಯ ರೂಪದಲ್ಲಿತ್ತು. ಈ ಕಲ್ಪನೆಗೆ ಈಗ ಮೂರ್ತ ಸ್ವರೂಪ ನೀಡುತ್ತಿದೆ ಜಾಕ್ ಮಂಜು ಟೀಂ.
ಇದು ಯಶಸ್ವಿಯಾದರೆ ಇದು ಕನ್ನಡ ಚಿತ್ರರಂಗದ ದಾಖಲೆಯಾಗಿ ಉಳಿಯಲಿದೆ. ಇಡೀ ದೇಶದ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗ ಕೊಡುವ ಕಾಣಿಕೆಯಾಗಲಿದೆ.