ಚಿತ್ರರಂಗದಲ್ಲಿ ದುಡಿದದ್ದೇಕ್ಕೇ ಸಂಭಾವನೆ ಸಿಗೋದು ಕಷ್ಟ. ಕೆಲವು ಸಂಸ್ಥೆ ಮತ್ತು ನಿರ್ಮಾಪಕರು ಬಿಟ್ಟರೆ ಕೈ ಎತ್ತೋರ ಸಂಖ್ಯೆಯೇ ಹೆಚ್ಚು. ಅಂತಾದ್ದರಲ್ಲಿ ರಕ್ಷಿತ್ ಶೆಟ್ಟಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಮ್ಮ ಇಡೀ ತಂಡಕ್ಕೆ ತಮ್ಮ ಚಿತ್ರದ ಗೆಲುವಿನ ಪಾಲನ್ನು ಹಂಚುತ್ತಿದ್ದಾರೆ.
777 ಚಾರ್ಲಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಚಿತ್ರ, 450ಕ್ಕೂ ಹೆಚ್ಚು ಸೆಂಟರ್ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕೆಜಿಎಫ್ ನಂತರ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಕಂಡ ಕನ್ನಡ ಸಿನಿಮಾ ಇದೇ. 777 ಚಾರ್ಲಿ.
ಹಾಗಾದರೆ ಚಿತ್ರ ಗಳಿಸಿರುವ ಲಾಭ ಎಷ್ಟು? ಇದು ಅಂದಾಜಿನ ಲೆಕ್ಕಾಚಾರವಲ್ಲ. ಖುದ್ದು ನಿರ್ಮಾಪಕರೂ ಆಗಿರೋ ರಕ್ಷಿತ್ ಶೆಟ್ಟಿಯವರೇ ನೀಡಿರುವ ಅಧಿಕೃತ ಲೆಕ್ಕ. ಇದುವರೆಗೆ 777 ಚಾರ್ಲಿ ಮಾಡಿರುವ ಒಟ್ಟಾರೆ ಬಿಸಿನೆಸ್ 150 ಕೋಟಿ. ನಿರ್ಮಾಪಕರಿಗೆ 90ರಿಂದ 100 ಕೋಟಿಗಳಷ್ಟು ಹಣ ಬರಬಹುದು ಎಂದು ವಿವರ ಕೊಟ್ಟಿದ್ದಾರೆ ರಕ್ಷಿತ್ ಶೆಟ್ಟಿ. ಇದರಲ್ಲಿ ಥಿಯೇಟರ್ ಬಿಸಿನೆಸ್ ಅಷ್ಟೇ ಅಲ್ಲ, ಸ್ಯಾಟಲೈಟ್, ಒಟಿಟಿ, ಆಡಿಯೋ, ಡಬ್ಬಿಂಗ್.. ಎಲ್ಲವೂ ಸೇರಿಯೇ ಇರುವ ಲೆಕ್ಕ.
ಅಷ್ಟೇ ಅಲ್ಲ, ಈಗ ಬಂದಿರೋ ಲಾಭದಲ್ಲಿ ಶೇ.10ರಷ್ಟನ್ನು ಚಿತ್ರತಂಡಕ್ಕೆ, ಸಿನಮಾಗೆ ಶ್ರಮಿಸಿದವರಿಗೆ ಹಂಚಲು ನಿರ್ಧರಿಸಿದ್ದಾರೆ ರಕ್ಷಿತ್ ಶೆಟ್ಟಿ. ಇನ್ನು ಲಾಭದ ಶೇ.5ರಷ್ಟನ್ನು ನಾಯಿಗಳ ಸಾಕಾಣಿಕೆಗೆ, ನೆರವಿಗೆ ನೀಡಲು ನಿರ್ಧರಿಸಿದ್ದಾರೆ.
ಅಂದಹಾಗೆ ಚಿತ್ರ ಈಗಿನ್ನೂ 25 ದಿನ ಪೂರೈಸಿದೆ. ವೀಕೆಂಡ್ಗಳಲ್ಲಿ ಈಗಲೂ ಭರ್ಜರಿ ಗಳಿಕೆ ಕಾಣುತ್ತಿರೋ 777 ಚಾರ್ಲಿ, ವಾರದ ದಿನಗಳಲ್ಲಿ ಸರಾಸರಿಗಿಂತ ಹೆಚ್ಚಿಗೇ ಕಲೆಕ್ಷನ್ ಮಾಡುತ್ತಿದೆ.