ಕಳೆದ ವಾರ ದಿಗಂತ್ ಅವರಿಗೆ ಸಂಭವಿಸಿದ ಒಂದು ಆಕಸ್ಮಿಕ ಒಂದು ಕ್ಷಣ ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದು ಸುಳ್ಳಲ್ಲ. ಗೋವಾದಿಂದ ದಿಗಂತ್ ಅವರನ್ನು ಏರ್`ಲಿಫ್ಟ್ ಮಾಡುತ್ತಿದ್ದಾರೆ ಎಂದಾಗ ತುಂಬಾ ಗಂಭೀರವಾಗಿಯೇ ಪೆಟ್ಟಾಗಿರಬೇಕು ಎಂದು ಆತಂಕಗೊಂಡಿದ್ದವರ ಸಂಖ್ಯೆಯೇ ದೊಡ್ಡದು. ಸಮ್ಮರ್ ಸಾಲ್ಟ್ ಮಾಡಲು ಹೋಗಿ ಎಡವಟ್ಟಾಗಿ ಕುತ್ತಿಗೆಗೆ ಪೆಟ್ಟು ಬಿದ್ದಿತ್ತು. ಎಲ್ಲರೂ ರಿಲ್ಯಾಕ್ಸ್ ಆಗಿದ್ದು ವೈದ್ಯರು ಆಪರೇಷನ್ ಸಕ್ಸಸ್ ಎಂದ ನಂತರ ಹಾಗೂ ಐಂದ್ರಿತಾ ರೇ ದಿಗಂತ್ ಅವರು ಹುಷಾರಾಗಿರುವ ಫೋಟೋ ಹಾಕಿದ ನಂತರ. ಈಗ ಖುದ್ದು ದಿಗಂತ್ ಬಂದಿದ್ದಾರೆ. ಪುಟ್ಟದೊಂದು ವಿಡಿಯೋ ಮಾಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಚಿತ್ರ ನಿರ್ಮಾಪಕ ವೆಂಕಟ್ ನಾರಾಯಣ್, ಗೋವಾ ಸಿಎಂ ಪ್ರಮೋದ್ ಸಾವಂತ್, ಮಣಿಪಾಲ್ ಆಸ್ಪತ್ರೆಯಲ್ಲಿ ದಿಗಂತ್ ಅವರಿಗೆ ಸರ್ಜರಿ ಮಾಡಿದ ಡಾ.ವಿದ್ಯಾಧರ್, ತಮ್ಮ ಫಿಸಿಯೋ ಅಬ್ರಹಾಂ, ಅಭಿಮಾನಿಗಳು ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ ದಿಗಂತ್. ಇನ್ನೆರಡು ವಾರಗಳಲ್ಲಿ ಸಂಪೂರ್ಣ ಚೇತರಿಸಿಕೊಳ್ಳೋ ಭರವಸೆ ನೀಡಿದ್ದಾರೆ.