ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ ಅವರ ಸಮಾಜ ಸೇವೆ ಕೆಲಸಗಳು ಮಾತ್ರ ನಿರಂತರವಾಗಿ ನಡೆಯುತ್ತಿವೆ. ಈಗ ಮತ್ತೊಂದು ಪುಣ್ಯದ ಕೆಲಸ ಮಾಡಿದ್ದಾರೆ. ಬಡವರಿಗೆ, ಶ್ರಮಿಕರಿಗೆ ಸಹಾಯ ಮಾಡುವುದನ್ನು ಮರೆಯದ ಸುದೀಪ್ ಅದಕ್ಕಾಗಿ ಒಂದು ಟ್ರಸ್ಟ್ ಕಟ್ಟಿರುವುದು ಗೊತ್ತಿದೆಯಷ್ಟೇ. ಆ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ.
ಚಿತ್ರದುರ್ಗದ ಚಳ್ಳಕೆರೆಯ ಪುಟ್ಟ ಗ್ರಾಮದ ಮಹಿಳೆ ಹೊನ್ನೂರಮ್ಮ. ಅನಾಥೆ. ಒಂದು ಹಳೆಯ ಮನೆಯಿತ್ತಾದರೂ ಬೀಳುವ ಸ್ಥಿತಿಯಲ್ಲಿತ್ತು. ಆ ಮನೆಯ ಮುಂಭಾಗದಲ್ಲಿ ಒಂದಿಷ್ಟು ಜಾಗ ಖಾಲಿಯಿತ್ತು. ಹಳೆ ಮನೆ ದುರಸ್ಥಿ ಮಾಡಿಸಿ, ಖಾಲಿಯಿದ್ದ ಜಾಗದಲ್ಲಿ ಪುಟ್ಟದೊಂದು ಶೀಟ್ ಮನೆ ಕಟ್ಟಿಸಿಕೊಟ್ಟಿದ್ದಾರೆ ಸುದೀಪ್.
ಸುಮಾರು 2 ಲಕ್ಷ ರೂ ವೆಚ್ಚದಲ್ಲಿ ಒಂದು ಕೋಣೆ, ಬಚ್ಚಲುಮನೆ ಇರೋ ಪುಟ್ಟ ಶೀಟ್ ಮನೆ ಕಟ್ಟಿಸಿದ್ದಾರೆ. ಈ ಮನೆ ನಮಗೆ ರಕ್ಷಣೆ ನೀಡುತ್ತಿದೆ. ಸುದೀಪಣ್ಣಂಗೆ ಧನ್ಯವಾದ ಎಂದಿದ್ದಾರೆ ಹೊನ್ನೂರಮ್ಮ.