ಮಿಂಚಾಗಿ ನೀನು ಬರಲು.. ಹಾಡು ನೆನಪಿದೆ ತಾನೇ. ಮರೆಯೋಕಾದರೂ ಹೇಗೆ ಸಾಧ್ಯ ಅಲ್ವಾ? ಆ ಹಾಡಿನ ಜೋಡಿ ಯೋಗರಾಜ್ ಭಟ್-ಜಯಂತ್ ಕಾಯ್ಕಿಣಿ-ಗೋಲ್ಡನ್ ಸ್ಟಾರ್ ಗಣೇಶ್-ಸೋನು ನಿಗಮ್. ಅವರೀಗ ಮತ್ತೆ ಒಂದಾಗಿದ್ದಾರೆ. ಹೊಸ ಹಾಡು ಬಿಟ್ಟಿದ್ದಾರೆ. 'ನಾನಾಡದ ಮಾತೆಲ್ಲವ ಕದ್ದಾಲಿಸು… ಅನ್ನೋ ಹಾಡು ಗಾಳಿಪಟ 2ನಲ್ಲಿದೆ. ಆ ಹಾಡು ಗಣೇಶ್ ಹುಟ್ಟುಹಬ್ಬಕ್ಕಾಗಿ ಗಾಳಿಪಟ 2 ತಂಡ ನೀಡುತ್ತಿರುವ ಕಾಣಿಕೆ.
ನಮ್ಮ ಗಣಿ ಜುಲೈ 2ಕ್ಕೆ ಊರಿನಲ್ಲಿರೋದಿಲ್ಲ. ಇದು ಗಣೇಶ್ ಹುಟ್ಟುಹಬ್ಬಕ್ಕೆ ನಮ್ಮ ತಂಡದ ಉಡುಗೊರೆ ಎಂದ ಯೋಗರಾಜ್ ಭಟ್, ಹಾಡಿನ ಪದಪದದ ಅರ್ಥವನ್ನೂ ವಿವರಿಸಿ ಬರೆದಿರುವ ಜಯಂತ್ ಕಾಯ್ಕಿಣಿಯವರಿಗೆ ಧನ್ಯವಾದ ಅರ್ಪಿಸಿದರು. ಮಿಂಚಾಗಿ ಹಾಡಿನಂತೆಯೇ ಈ ಹಾಡು ಕೂಡಾ ಹಿಟ್ ಆಗಲಿದೆ ಎಂದರು ಭಟ್. ಈ ಹಾಡು ಕೇಳಿ ನಾನು ಮತ್ತೆ 15 ವರ್ಷ ಹಿಂದಕ್ಕೆ ಹೋದೆ. ಕುದುರೆಮುಖದಲ್ಲಿ ಸುಮಾರು 200 ಜನ ನೃತ್ಯಗಾರರೊಂದಿಗೆ ಹಾಡಿನ ಚಿತ್ರೀಕರಣವಾಗಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅದ್ಧೂರಿ ಸೆಟ್ ಹಾಕಿಸಿದ್ದರು ಎಂದು ನಿರ್ಮಾಪಕರನ್ನು ಮನಸಾರೆ ಹೊಗಳಿದರು ಯೋಗರಾಜ್ ಭಟ್. ಕಲಾ ನಿರ್ದೇಶಕ ಪಂಡಿತ್, ಡಾನ್ಸ್ ಮಾಸ್ಟರ್ ಧನು ಅವರನ್ನೂ ಮೆಚ್ಚಿಕೊಂಡರು.
ಹಾಡು ತುಂಬಾ ಚೆನ್ನಾಗಿದೆ. ನನ್ನ ಮಗಳು ಸದಾ ಕೇಳುವ ಹಾಡಿದು. ಹಾಡಿಗೆ ಬಳಸಿದ ಪ್ರತಿ ವಸ್ತುಗಳನ್ನೂ ಮನೆಗೆ ತರಿಸಿ ಇಟ್ಟುಕೊಂಡಿದ್ದೇನೆ ಎಂದವರು ರಮೇಶ್ ರೆಡ್ಡಿ.