ಭಾರತ ಕಂಡ ಅಪರೂಪದ ಶ್ರೇಷ್ಟ ಪ್ರಧಾನಿಗಳಲ್ಲಿ ಒಬ್ಬರು ಭಾರತರತ್ನ ಪುರಸ್ಕøತ ಅಟಲ್ ಬಿಹಾರಿ ವಾಜಪೇಯಿ. ಅವಿವಾಹಿತರಾಗಿದ್ದ ವಾಜಪೇಯಿ 3 ಬಾರಿ ಪ್ರಧಾನಿಯಾಗಿದ್ದರು. ಸ್ವಾತಂತ್ರ್ಯ ಹೋರಾಟ ಮತ್ತು ತುರ್ತು ಪರಿಸ್ಥಿತಿ ವಿರುದ್ಧ ಚಳವಳಿ ಎರಡರಲ್ಲಿಯೂ ಗುರುತಿಸಿಕೊಂಡಿದ್ದ ವಾಜಪೇಯಿ ಅದ್ಭುತ ವಾಗ್ಮಿ. ಕವಿ. ಸಾಹಿತಿ. ದೂರದೃಷ್ಟಿ ಹೊಂದಿದ್ದ ಮುತ್ಸದ್ದಿ. ಅಜಾತಶತ್ರು ಎಂಬ ಬಿರುದು ಹೊಂದಿದ್ದ ರಾಜಕಾರಣಿ. ಈಗ ಅವರ ಕುರಿತು ಸಿನಿಮಾ ಬರುತ್ತಿದೆ.
ಅಟಲ್ ಅನ್ನೋ ಹೆಸರಲ್ಲಿ ಹಿಂದಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ತಯಾರಿ ಶುರುವಾಗಿದೆ. ರಾಜಕಾರಣಿಗಳು ಬರುತ್ತಾರೆ. ಹೋಗುತ್ತಾರೆ. ಪಕ್ಷಗಳು ನಿರ್ಮಾಣವಾಗುತ್ತವೆ. ನಾಶವಾಗುತ್ತವೆ. ಆದರೆ ಈ ದೇಶ ಇರಬೇಕು ಎನ್ನುವುದು ಸಂಸತ್ನಲ್ಲಿ ಅಟಲ್ ಮಾಡಿದ ಪ್ರಸಿದ್ಧ ಭಾಷಣದ ತುಣುಕು. ಅದನ್ನೇ ಟೀಸರ್ ರೀತಿ ರಿಲೀಸ್ ಮಾಡಲಾಗಿದೆ.
ಉಲ್ಲೇಖ್ ಎನ್.ಪಿ. ಎಂಬುವವರು ಬರೆದಿರುವ ಕೃತಿಯನ್ನಾಧರಿಸಿ ಸಿನಿಮಾ ನಿರ್ಮಾಣವಾಗುತ್ತಿದೆ. ವಿನೋದ್ ಬಾನುಶಾಲಿ ಮತ್ತು ಸಂದೀಪ್ ಸಿಂಗ್ ಎಂಬುವವರು ಈ ಚಿತ್ರದ ನಿರ್ಮಾಪಕರು. ನಿರ್ದೇಶಕರು ಯಾರು ಎಂಬುವುದನ್ನು ಸೇರಿದಂತೆ ಎಲ್ಲವನ್ನೂ ಸದ್ಯಕ್ಕೆ ಸಸ್ಪೆನ್ಸ್ ಆಗಿಡಲಾಗಿದೆ.
ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ (ವಿಮರ್ಶಾತ್ಮಕ ಚಿತ್ರ) , ಲಾಲ್ ಬಹದ್ದೂರ್ ಶಾಸ್ತ್ರಿ (ಸಾವಿನ ನಿಗೂಢತೆಯ ಥ್ರಿಲ್ಲರ್) ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಕುರಿತ ಸಿನಿಮಾಗಳು ಬಂದಿವೆ. ಬಾಳಾ ಠಾಕ್ರೆ, ಜಯಲಲಿತಾ, ವೈಎಸ್ಆರ್ ಕುರಿತ ಚಿತ್ರಗಳೂ ಬಂದಿವೆ. ಆದರೆ ಯಾವೊಂದು ಚಿತ್ರವೂ ಬಾಕ್ಸಾಫೀಸ್ನಲ್ಲಿ ಭರ್ಜರಿ ಎನ್ನುವಂತೆ ಗೆದ್ದಿಲ್ಲ ಎನ್ನುವುದೂ ವಿಶೇಷ.