ಒಂದು ಮೊಟ್ಟೆಯ ಕಥೆ ನಂತರ ಹಲವು ಚಿತ್ರಗಳಲ್ಲಿ ಕಾಮಿಡಿ ಹಾಗೂ ಸಾಫ್ಟ್ ರೋಲ್‍ಗಳಲ್ಲಿ ನಟಿಸಿದ್ದ ರಾಜ್ ಬಿ.ಶೆಟ್ಟಿ, ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಸೈಕೋ ರೀತಿ ನಟಿಸಿ ಗೆದ್ದಿದ್ದರು. ಪ್ರೇಕ್ಷಕರಿಗೂ ಒಂದು ರೀತಿ ಭಯ ಹುಟ್ಟಿಸಿದ್ದ ರಾಜ್ ಬಿ.ಶೆಟ್ಟಿ ಈಗ ಸೀರಿಯಸ್ ಆಗಿ ಕ್ಯಾಬ್ ಡ್ರೈವರ್ ಆಗಿದ್ದಾರೆ. ತುರ್ತು ನಿರ್ಗಮನ ಚಿತ್ರದಲ್ಲಿ.
ಒಂದು ಮೊಟ್ಟೆಯ ಕಥೆ ಮುಗಿದಾಗ ಈ ಚಿತ್ರದ ಆಫರ್ ಬಂದಿತ್ತು. ಆಗ ಎಲ್ಲರೂ ನನಗೆ ಕಾಮಿಡಿ ರೋಲ್‍ಗಳನ್ನೇ ಕೊಡುತ್ತಿದ್ದರು. ಹೀಗಾಗಿ ಈ ಸೀರಿಯಸ್ ಕ್ಯಾರೆಕ್ಟರ್ ಇಷ್ಟವಾಯಿತು. ಚಿತ್ರದಲ್ಲಿ ನನ್ನದು ಕ್ಯಾಬ್ ಡ್ರೈವರ್ ಪಾತ್ರ. ಅಗತ್ಯಕ್ಕಿಂತ ಹೆಚ್ಚು ಸಾಲ ಮಾಡಿಕೊಂಡು.. ಇನ್ಯಾಕೆ ಬದುಕಬೇಕು ಎಂಬ ಚಿಂತೆಯಲ್ಲಿರೋ ಪಾತ್ರ ನನ್ನದು ಎಂದಿದ್ದಾರೆ ರಾಜ್ ಬಿ.ಶೆಟ್ಟಿ.
ಸಾವನ್ನು ಪ್ರೀತಿಸುವವನು ಬದುಕನ್ನೂ ಪ್ರೀತಿಸುತ್ತಾನೆ ಎಂಬ ಸಂದೇಶವಿರೋ ಚಿತ್ರದಲ್ಲಿ ನಿರ್ದೇಶಕ ಹೇಮಂತ್ ಚೆನ್ನಾಗಿ ಕಥೆ ಹೇಳಿದ್ದಾರೆ. ವಿಕ್ರಂ ಹಾಗೂ ನನ್ನ ಪಾತ್ರದ ಮೂಲಕ ಕಥೆ ಸಾಗುತ್ತದೆ. ವಿಕ್ರಂ ಪಾತ್ರದಲ್ಲಿ ಸುನಿಲ್ ರಾವ್ ಇದ್ದಾರೆ ಎಂದಿದ್ದಾರೆ ರಾಜ್ ಬಿ.ಶೆಟ್ಟಿ.
ಎಕ್ಸ್‍ಕ್ಯೂಸ್ ಮಿ ಸುನಿಲ್ ರಾವ್ ಸುದೀರ್ಘ ಗ್ಯಾಪ್ ನಂತರ ಈ ಚಿತ್ರದ ಮೂಲಕ ತೆರೆಗೆ ಬರುತ್ತಿದ್ದಾರೆ. ಸುಧಾರಾಣಿ ಅವರಂತೂ ಈ ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಹಿಂದೆಂದೂ ಇಲ್ಲದಷ್ಟು ಎಕ್ಸೈಟ್ ಆಗಿದ್ದಾರೆ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.