777 ಚಾರ್ಲಿ ರಿಲೀಸ್ ಆದ ನಂತರ ದಿನ ದಿನಕ್ಕೂ ಕಲೆಕ್ಷನ್ ಹೆಚ್ಚಿಸಿಕೊಳ್ತಿದೆ. ರಕ್ಷಿತ್ ಶೆಟ್ಟಿ ನಟಿಸಿ ನಿರ್ಮಿಸಿದ್ದ 777 ಚಾರ್ಲಿ ಚಿತ್ರ ನಾಯಿ ಪ್ರೇಮಿಗಳಿಗೆಲ್ಲ ಸಿಕ್ಕಾಪಟ್ಟೆ ಇಷ್ಟವಾಗಿದೆ. ಚಿತ್ರದ ಭಾವುಕ ಸನ್ನಿವೇಶಗಳಿಗೆ ಕಣ್ಣೀರಿಟ್ಟಿರುವ ಪ್ರೇಕ್ಷಕರು ಬಾಕ್ಸಾಫೀಸ್ ತುಂಬಿಸುತ್ತಿದ್ದಾರೆ. ಹೀಗಾಗಿ ಮೂರೇ ದಿನಕ್ಕೆ 30 ಕೋಟಿ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿದೆ 777 ಚಾರ್ಲಿ.
30 ಕೋಟಿಗೂ ಹೆಚ್ಚು ಕಲೆಕ್ಷನ್ ಲೆಕ್ಕ ಕರ್ನಾಟಕದ್ದು ಮಾತ್ರ. ಉಳಿದಂತೆ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿರುವುದು ತೆಲುಗು ಮತ್ತು ಮಲಯಾಳಂನಲ್ಲಿ. ಎರಡೂ ಭಾಷೆಗಳಲ್ಲಿ ಕಲೆಕ್ಷನ್ ತಲಾ 1.20 ಕೋಟಿ ದಾಟಿದೆ. ತಮಿಳಿನಲ್ಲಿ 50 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಆಗಿದೆ. ಉತ್ತರ ಭಾರತ ಪೂರ್ತಿ ಅಂದರೆ ಹಿಂದಿಯಲ್ಲಿಯೂ ಒಂದೂವರೆ ಕೋಟಿ ಕಲೆಕ್ಷನ್ ದಾಟಿದೆ.
ವಿಶೇಷಗಳೇನಿದೆ ಎನ್ನುವಂತಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಹೌದಾದರೂ ಚಿತ್ರವನ್ನು ಕನ್ನಡ ಹೊರತುಪಡಿಸಿ ಉಳಿದೆಡೆ ಲಿಮಿಟೆಡ್ ಶೋಗಳಲ್ಲೇ ರಿಲೀಸ್ ಮಾಡಲಾಗಿತ್ತು. ಸೀಮಿತ ಶೋಗಳಲ್ಲಿಯೇ 777 ಚಾರ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವುದು ವಿಶೇಷ. ಇನ್ನೊಂದು ಖುಷಿ ಸುದ್ದಿ ಇದೆ. ರಿಲೀಸ್ ಆದ ನಂತರ ಸ್ಕ್ರೀನ್‍ಗಳ ಸಂಖ್ಯೆ ಮತ್ತು ಡಿಮ್ಯಾಂಡ್ ಹೆಚ್ಚಾಗುತ್ತಿದೆ.
ಮೊದಲ ಚಿತ್ರಕ್ಕೇ ಸಿಕ್ಕಿದ ಈ ಓಪನಿಂಗ್ ಮತ್ತು ಯಶಸ್ಸು ಸಹಜವಾಗಿಯೇ ಕಿರಣ್ ರಾಜ್ ಅವರಿಗೆ ಖುಷಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕರು ಥ್ರಿಲ್ ಆಗಿದ್ದಾರೆ.