ಒಂದು ಸಿನಿಮಾ ನೋಡುಗರ ಮೇಲೆ ಯಾವ್ಯಾವ ರೀತಿಯಲ್ಲೆಲ್ಲ ಪರಿಣಾಮ ಬೀರಬಹುದು ಎನ್ನುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಬೆರಗಾಗಿದ್ದೇವೆ. ನಕ್ಕಿದ್ದೇವೆ. ಒಂದೊಂದು ಸಿನಿಮಾ ಬೀರುವ ಒಂದೊಂದು ತರಾ. ಅದು ಸಿನಿಮಾಗಳಿಗಿಂತ ಹೆಚ್ಚಾಗಿ ನೋಡುವವರ ಮನಸ್ಥಿತಿ. ಈಗ ಕೆಜಿಎಫ್ ಸಿನಿಮಾ ಕೂಡಾ ಅಂಥದ್ದೇ ಕಾರಣದಿಂದ ಸುದ್ದಿಯಾಗಿದೆ.
ಇಲ್ಲೊಬ್ಬ 15 ವಯಸ್ಸಿನ ಬಾಲಕ ಕೆಜಿಎಫ್ನ್ನು ಹಲವು ಬಾರಿ ನೋಡಿದ್ದಾನೆ. ನೋಡಿದ ಎಲ್ಲರಂತೆಯೇ ಇಷ್ಟಪಟ್ಟಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ರಾಕಿಭಾಯ್ ಪಾತ್ರ ಸಿಗರೇಟು ಸೇದುವುದು ಇಷ್ಟವಾಗಿ ಹೋಗಿದೆ. ಮತ್ತೆ ಮತ್ತೆ ನೋಡಿದ್ದಾನೆ. ಅಂಗಡಿಗೆ ಹೋಗಿ ಪ್ಯಾಕುಗಟ್ಟಲೆ ಸಿಗರೇಟು ತಂದಿದ್ದಾನೆ. ಪದೇ ಪದೇ ಸೇದಿದ್ದಾನೆ. ಎಷ್ಟರಮಟ್ಟಿಗೆ ಎಂದರೆ ಕೆಲವೇ ದಿನಗಳಲ್ಲಿ ಅವನ ಹೊಟ್ಟೆ ತುಂಬಾ ಅಲರ್ಜೆಟಿಕ್ ಆಗಿ ಆಸ್ಪತ್ರೆ ಸೇರಿದ್ದಾನೆ. ಆ ಹುಡುಗ ಹೈದರಾಬಾದಿನವನು. 15 ವರ್ಷದ ಹುಡುಗನಾದ ಕಾರಣ ಹೆಸರು ಮತ್ತಿತರ ವಿವರ ಹೇಳುವಂತಿಲ್ಲ. ಹೇಳಬಾರದು.
ಇದರ ಬಗ್ಗೆ ಮಕ್ಕಳು ಹೆಚ್ಚು ನಿಗಾವಹಿಸಬೇಕು ಎನ್ನುವುದು ವೈದ್ಯರ ವಾದ. ಇನ್ನು ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಬೇಕಾ ಎನ್ನುವವರಿಗೂ ಕೊರತೆ ಇಲ್ಲ. ಆದರೆ ಅದೇ ಕೆಜಿಎಫ್ನಲ್ಲಿ ರಾಕಿಭಾಯ್ ತಾಯಿಯನ್ನು ಪ್ರೀತಿಸುವ, ಆರಾಧಿಸುವ ದೃಶ್ಯಗಳೂ ಇದ್ದವು. ಯಶ್ ಅವರಷ್ಟೇ ಸ್ಟ್ರಾಂಗ್ ಆದ ರಮಿಕಾ ಸೇನ್ ಪಾತ್ರವೂ ಇತ್ತು. ಅದೆಲ್ಲವನ್ನೂ ಬಿಟ್ಟು ಅವನಿಗೆ ರಾಕಿಭಾಯ್ ಸಿಗರೇಟು ಸೇದುವ ದೃಶ್ಯ ಇಷ್ಟವಾಗಿ, ಅದಕ್ಕೆ ಗಂಟುಬಿದ್ದರೆ ಯಾರು ಏನು ಮಾಡೋಕೆ ಆಗುತ್ತೆ. ಅಂದಹಾಗೆ ರಿಯಲ್ ರಾಕಿಭಾಯ್ ಅರ್ಥಾತ್ ಯಶ್, ತಮ್ಮ ರಿಯಲ್ ಲೈಫಿನಲ್ಲಿ ಸಿಗರೇಟು ಸೇದುವ ಚಟ ಅಂಟಿಸಿಕೊಂಡಿಲ್ಲ.