ಪ್ರತಿಯೊಬ್ಬರಿಗೂ ಆಸೆಗಳಿರುತ್ತವೆ. ವಯಸ್ಸಿಗೆ ತಕ್ಕಂತೆ ಲೈಂಗಿಕ ಆಸೆಗಳೂ ಮೂಡುತ್ತವೆ. ಅದು ತಪ್ಪೂ ಅಲ್ಲ. ಪ್ರಕೃತಿ ಸಹಜವಾಗಿ ನಡೆಯುವ ಕ್ರಿಯೆಗಳು ಅಪರಾಧವೂ ಅಲ್ಲ. ಆದರೆ, ಅಂತಾದ್ದೊಂದು ಆಸೆ ಈಡೇರಿಸಿಕೊಳ್ಳಲು ಅಸಾಧ್ಯ ಎನ್ನುವ ಸ್ಥಿತಿಯಲ್ಲಿರುವವರು ಏನು ಮಾಡಬೇಕು..? ಅದರಲ್ಲೂ ಅಂತಹ ಸ್ಥಿತಿಯಲ್ಲಿ ಮಗನೇ ಇದ್ದರೆ.. ವ್ಹೀಲ್ ಚೇರ್ ರೋಮಿಯೋ ಚಿತ್ರದ ವಿಭಿನ್ನತೆಯೇ ಅದು.
ಚಿತ್ರದಲ್ಲಿ ನಾಯಕ ವ್ಹೀಲ್ವೇರ್ನಲ್ಲೇ ಬದುಕುತ್ತಾನೆ. ಆತನಿಗೆ ಟೆಟ್ರಾಪ್ಲಿಗಿಯಾ ಸಿಂಡ್ರೋಮ್ ಕಾಯಿಲೆ. ಆ ಕಾಯಿಲೆ ಇದ್ದವರಿಗೆ ದೇಹದ ಮೇಲ್ಭಾಗ ಮತ್ತು ಕೆಳಭಾಗದ ಯಾವುದೇ ಅಂಗಗಳನ್ನು ಸ್ವಯಂ ಆಗಿ ಮೂವ್ ಮಾಡೋಕೆ ಆಗಲ್ಲ. ಅಸಹಾಯಕರು. ಅಂತಹ ಕಾಯಿಲೆ ಇರುವವನಿಗೆ ವಧು ಹುಡುಕಲು ಹೊರಡುತ್ತಾನೆ ಅಪ್ಪ. ಮಗನನ್ನು ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವನಿಗೆ ಕಣ್ಣೇ ಕಾಣದ ವೇಶ್ಯೆಯೊಬ್ಬಳ ಮೇಲೆ ಪ್ರೀತಿಯಾಗುತ್ತದೆ. ಅವರನ್ನು ಒಂದುಗೂಡಿಸಲು ಅಪ್ಪನೇ ಹೊರಡುತ್ತಾನೆ. ಇದನ್ನು ಒಂದಿಷ್ಟು ಕಾಮಿಡಿ ಬ್ಯಾಕ್ಗ್ರೌಂಡ್ನಲ್ಲಿಯೇ ಹೇಳಿದ್ದೇನೆ. ಕಚಗುಳಿಯಿಡುತ್ತಲೇ ಗಂಭೀರವಾಗುತ್ತಾ ಸಾಗುವ ಕಥೆ ಚಿತ್ರದಲ್ಲಿದೆ ಎನ್ನುತ್ತಾರೆ ಡೈರೆಕ್ಟರ್ ನಟರಾಜ್.
ಅನುಮಾನವೇ ಇಲ್ಲ. ಮಗನನ್ನು ತಂದೆಯೇ ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗುವ ಕಲ್ಪನೆಯೇ ವಿಚಿತ್ರವಾದದ್ದು. ಆದರೆ ಪತ್ನಿಯೇ ಪತಿಯನ್ನು ವೇಶ್ಯಾಗೃಹಕ್ಕೆ ಕರೆದೊಯ್ಯುವ ಕಥೆಯನ್ನು ಪುರಾಣದಲ್ಲಿ ಕೇಳಿರುವ ನಮಗೆ ಇದು ವಿಭಿನ್ನ ಎನಿಸುವುದು ಸಹಜ. ಈ ಕಥೆಯಲ್ಲಿ ಮಗನಾಗಿರೋದು ರಾಮ್ ಚೇತನ್. ವೇಶ್ಯೆಯ ಪಾತ್ರದಲ್ಲಿ ನಾಯಕನ ಲವ್ ಆಗಿ ನಟಿಸಿರೋದು ಮಯೂರಿ. ಹೀರೋನನ್ನು ವೇಶ್ಯೆಯ ಮನೆಗೆ ಕರೆದೊಯ್ಯುವ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ನಟಿಸಿದ್ದರೆ, ವೇಶ್ಯೆಯರು ಮತ್ತು ಗಿರಾಕಿಗಳ ನಡುವಿನ ಮಾಮಾ ಆಗಿ ನಟಿಸಿರೋದು ರಂಗಾಯಣ ರಘು. ತಬಲಾ ನಾಣಿ ಅವರಿಗೆ ಬೇರೆಯದ್ದೇ ಶೇಡ್ ಇದೆ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.
ಥಿಯೇಟರಿಗೆ ಹೋದವರಿಗೆ ಬೇರೆಯದೇ ಅನುಭವ ಸಿಗುವುದು ಪಕ್ಕಾ. ಏಕೆಂದರೆ ಕಥೆಯೇ ಅಂಥಾದ್ದು. ತಿಮ್ಮಪ್ಪ ವೆಂಕಟಾಚಲ