ತಮಿಳು ಬ್ಯೂಟಿ ಸಾಯಿ ಪಲ್ಲವಿ ಅಭಿನಯದ ಗಾರ್ಗಿ ಸಿನಿಮಾ ರಿಲೀಸ್ ಆಗೋಕೆ ಸಿದ್ಧವಾಗಿದೆ. ಆ ಚಿತ್ರ ಕನ್ನಡದಲ್ಲೂ ಬರುತ್ತಿದ್ದು, ಕನ್ನಡಕ್ಕೂ ಸ್ವತಃ ಡಬ್ಬಿಂಗ್ ಮಾಡಿದ್ದಾರೆ. ಕರ್ನಾಟಕದವರಾಗಿಯೇ ಕನ್ನಡ ವರ್ಷನ್‍ಗೆ ಡಬ್ ಮಾಡದ ನಾಯಕಿಯರಿರುವಾಗ, ಸಾಯಿ ಪಲ್ಲವಿ ಬೇರೆಯದೇ ಹಾದಿ ತುಳಿದಿದ್ದಾರೆ. ಡಬ್ಬಿಂಗ್‍ನ್ನೂ ಮುಗಿಸಿಕೊಟ್ಟಿದ್ದಾರೆ. ಹೇಗಿತ್ತು ಕನ್ನಡ ಡಬ್ಬಿಂಗ್ ಅನುಭವ ಎಂದರೆ ಸಾಯಿ ಪಲ್ಲವಿ ಉತ್ತರಿಸಿರೋದು ಹೀಗೆ..
ಕನ್ನಡದಲ್ಲಿ ಡಬ್ ಮಾಡುವುದು ಆರಂಭದಲ್ಲಿ ಕಷ್ಟ ಎನ್ನಿಸೋಕೆ ಶುರುವಾಯ್ತು. ಅದರಲ್ಲೂ ಲ.. ನ.. ಣ.. ಪದಗಳ ಉಚ್ಚಾರಣೆ ತಪ್ಪಾಗುತ್ತಲೇ ಇತ್ತು. ಆದರೆ, ನಮ್ಮ ಟೀಮಿನ ಹುಡುಗರ ತಾಳ್ಮೆ ದೊಡ್ಡದು. ನಾನು ಸರಿಯಾಗಿ ಮಾಡುವವರೆಗೆ ಕಾಯ್ದರು. ಇಷ್ಟಿದ್ದರೂ ಹೇಳಿದ ಸಮಯಕ್ಕೇ ಡಬ್ಬಿಂಗ್ ಮುಗಿಸಿಕೊಟ್ಟಿದ್ದೇನೆ ಎನ್ನುತ್ತಾರೆ ಸಾಯಿ ಪಲ್ಲವಿ.
ಕನ್ನಡದಲ್ಲಿ ಸಾಯಿಪಲ್ಲವಿ ನೋಡಿದ ಮೊದಲ ಸಿನಿಮಾ ಗಂಟುಮೂಟೆಯಂತೆ. ಅದಾದ ಮೇಲೆ ಯುಟರ್ನ್, ಲೂಸಿಯಾ, ಕೆಜಿಎಫ್ 1, ಕೆಜಿಎಫ್ 2.. ಸೇರಿದಂತೆ ಕೆಲವು ಚಿತ್ರಗಳನ್ನು ನೋಡಿದ್ದಾರೆ.
ಭಾಷೆ ಅನ್ನೋದು ಕೇವಲ ಪದಗಳಲ್ಲ. ಡಬ್ಬಿಂಗ್ ಮಾಡಿ ಸಿನಿಮಾ ಮಾಡುವುದೆಂದರೆ ಅದರಲ್ಲಿ ಸ್ಥಳೀಯ ಭಾವನೆಗಳಿರುತ್ತವೆ. ಅವುಗಳ ಮೂಲಕವೇ ಜನರಿಗೆ ಹತ್ತಿರವಾಗಬೇಕು. ಆದರೆ, ಸಿನಿಮಾದಲ್ಲಿ ಕಥೆಗೆ ಬದ್ಧರಾಗಿರಬೇಕು ಅನ್ನೋದು ಸಾಯಿಪಲ್ಲವಿ ನಿಲುವು.