ನಿರ್ದೇಶಕ ಶಶಾಂಕ್ ಚಿತ್ರಗಳೆಂದರೆ ಅಲ್ಲೊಂದು ಚೆಂದದ ಕಥೆಯಿದ್ದೇ ಇರುತ್ತದೆ. ಉತ್ಕಟ ಭಾವನೆಗಳ ಸಂಘರ್ಷದ ಜೊತೆ ಜೊತೆಯಲ್ಲೇ ಎಲ್ಲರ ಹೃದಯಕ್ಕೂ ತಟ್ಟುವ ಕಥೆ ಇಟ್ಟುಕೊಂಡೇ ಬರುತ್ತಾರೆ ಶಶಾಂಕ್. ಮೊಗ್ಗಿನ ಮನಸ್ಸು ಚಿತ್ರದಿಂದಲೂ ಶಶಾಂಕ್ ಚಿತ್ರಗಳಲ್ಲಿ ಬ್ಯೂಟಿಫುಲ್ ಸ್ಟೋರಿ.. ಆ ಸ್ಟೋರಿಯೊಳಗೇ ಒಂದು ಹೃದಯ ಮುಟ್ಟುವ ಸಂದೇಶ.. ಇರುತ್ತದೆ. ಲವ್ 360 ಟ್ರೇಲರ್ ನೋಡಿದವರಿಗೆ ಒನ್ಸ್ ಎಗೇನ್ ಅದೇ ಫೀಲಿಂಗ್ ಬರುತ್ತದೆ. ಲವ್ 360ಯ ಪುಟ್ಟ ಟ್ರೇಲರ್‍ನಲ್ಲೇ ಒಂದು ಅದ್ಭುತ ಕಥೆಯಿದೆ.
ಶುದ್ಧ ಪ್ರೀತಿಯ ಪಯಣ ಎಂದೂ ಸುಗಮನವಾಗಿ ಸಾಗಲ್ಲ ಎಂಬ ಷೇಕ್ಸ್‍ಪಿಯರ್ ಮಾತಿನೊಂದಿಗೇ ಶುರುವಾಗುವ ಟ್ರೇಲರ್.. ತುಂಟಾಟದ ಪ್ರೇಮಿಗಳು.. ಅವರ ನಡುವೆ ಸಂಭವಿಸಿರೋ ವಿಚಿತ್ರವೋ.. ವಿಭಿನ್ನವೋ.. ಎನ್ನಿಸುವ ಘಟನೆ.. ನಾಯಕಿ ಹುಚ್ಚಿಯೇ ಇರಬಹುದೇನೋ ಎನ್ನಿಸುತ್ತಲೇ.. ಇಲ್ಲ ಅವಳು ನಾರ್ಮಲ್ ಆಗಿಯೇ ಇದ್ದಾಳೆ ಎನ್ನಿಸುವ ಸಂಭಾಷಣೆ.. ನಾಯಕಿಯನ್ನು ಪ್ರಾಣದಂತೆ ಪ್ರೀತಿಸುವ ಹುಡುಗ.. ಅಲ್ಲೇನೋ ಸಸ್ಪೆನ್ಸು.. ಹೃದಯ ತಾಕುವ ಸಣ್ಣ ಸಣ್ಣ ದೃಶ್ಯಗಳನ್ನಿಟ್ಟುಕೊಂಡೇ ಕಥೆ ಹೇಳಲು ಹೊರಟಿದ್ದಾರೆ ಶಶಾಂಕ್. ಟ್ರೇಲರ್‍ನಲ್ಲಿ ಗೊತ್ತಾಗೋದೇನಂದರೆ ಇಲ್ಲೊಂದು ಚೆಂದದ ಕಥೆಯಿದೆ ಅನ್ನೋದು.
ಚಿತ್ರದ ಟ್ರೇಲರ್‍ನ್ನು ರಿಲೀಸ್ ಮಾಡಿರೋ ಡಾಲಿ ಧನಂಜಯ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರದ ಮೂಲಕ ಪ್ರವೀಣ್ ಎಂಬ ಹೊಸ ಹುಡುಗನನ್ನು ಪರಿಚಯಿಸುತ್ತಿದ್ದಾರೆ ಶಶಾಂಕ್. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ಇಲ್ಲಿ ಅಕ್ಷರಶಃ ಬೆರಗು ಹುಟ್ಟಿಸುತ್ತಾರೆ.