ಪ್ಯಾನ್ ಇಂಡಿಯಾ ವರ್ಸಸ್ ಪಾನ್ ಇಂಡಿಯಾ..
ಇದು ಇತ್ತೀಚೆಗೆ ತುಂಬಾ ತುಂಬಾ ಚರ್ಚೆಯಾದ ವಿಷಯ. ಶುರುವಾಗಿದ್ದು ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ಶಾರೂಕ್ ಖಾನ್ರಿಂದ. ಸ್ವಚ್ಛ ಭಾರತ್ ಅಭಿಯಾನಕ್ಕಾಗಿ ನಾನು ಗುಟ್ಕಾ ಜಾಹೀರಾತು ಮಾಡಲ್ಲ ಎಂದು ಹೇಳಿದ್ದ ಅಕ್ಷಯ್ ಕುಮಾರ್, ಮೂರೇ ವರ್ಷಗಳಲ್ಲಿ ಕೋಟಿ ಕೋಟಿಯ ಆಸೆಗೆ ಬಿದ್ದು ಕಣಕಣದಲ್ಲಿ ಕೇಸರಿ ಎಂದು ಬಿಟ್ಟರು. ಒಂದೆಡೆ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಜಾಹೀರಾತಿನಲ್ಲಿ ನಟಿಸುತ್ತಲೇ ಇನ್ನೊಂದೆಡೆ ಗುಟ್ಕಾ ಜಾಹೀರಾತಿಗೂ ಬಂದ ಶಾರೂಕ್ ಖಾನ್ ಕೂಡಾ ಕೇಸರಿಯನ್ನು ಕಣಕಣದಲ್ಲೂ ತುಂಬಿಕೊಂಡರು.ನಾನು ವಿಮಲ್ ಎಲಚಿಗೆ ಜಾಹೀರಾತು ಮಾಡುತ್ತಿದ್ದೇನೆಯೇ ಹೊರತು ಗುಟ್ಕಾಗೆ ಅಲ್ಲ ಎನ್ನುವ ಮೂಲಕ ಅಜಯ್ ದೇವಗನ್ ನಗೆಪಾಟಲಿಗೀಡಾದರು. ಇದೆಲ್ಲದರ ಮಧ್ಯೆ ಇವರನ್ನೆಲ್ಲ ಪಾನ್ ಮಸಾಲಾ ಸ್ಟಾರ್ ಎಂದು ಇಡೀ ಇಂಡಿಯಾ ಕೂಗಿದ್ದು ಅಜಯ್ ದೇವಗನ್ ಹಿಂದಿ ರಾಷ್ಟ್ರಭಾಷೆ ವಿವಾದದ ನಂತರ.
ಆದರೆ ಯಶ್ ಕೋಟಿ ಕೋಟಿಯನ್ನೇ ಮುಂದಿಟ್ಟರೂ.. ಗುಟ್ಕಾ ಜಾಹೀರಾತು ಬೇಡ ಎಂದು ಹಿಂದೆ ಸರಿದಿದ್ದಾರೆ. ಇದನ್ನು ಮುಂಬೈ ಮೂಲದ ಜಾಹೀರಾತು ಸಂಸ್ಥೆಯ ಮುಖ್ಯಸ್ಥರಾದ ಅರ್ಜುನ್ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ನಟನಾದವನು ಕೇವಲ ತೆರೆಯ ಮೇಲೆ ಅಷ್ಟೇ ಅಲ್ಲ, ತೆರೆಯ ಹಿಂದೆಯೂ ಹೀರೋ ಆಗಿರಬೇಕು. ಹೀಗಾಗಿ ಇಂತಹ ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ ಯಶ್.
ಕರ್ನಾಟಕದಲ್ಲಿ ಡಾ.ರಾಜ್, ಪುನೀತ್ ಇಂತಹ ಮಾದರಿ ಅನುಸರಿಸುತ್ತಿದ್ದರು. ಈಗ ಯಶ್ ಕೂಡಾ ಅದೇ ಹಾದಿ ಹಿಡಿದಿದ್ದಾರೆ.