ಯಶ್ ಎಲ್ಲಿಯೇ ಹೋಗಲಿ.. ಕನ್ನಡವನ್ನು ಬಿಟ್ಟುಕೊಟ್ಟವರಲ್ಲ. ಬಿಟ್ಟುಕೊಟ್ಟೂ ಇಲ್ಲ. ಹಾಗಂತ ಹಾರಾಡುವುದೂ ಇಲ್ಲ. ಘೋಷಣೆಯನ್ನೂ ಮೊಳಗಿಸಲ್ಲ. ಟೀಕಿಸಿದವರ ಜೊತೆ ಮನಸ್ಸುಗಳೂ ಮುರಿಯದಂತೆ.. ಅವರೇ ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಇರುವ ರೀತಿ ತಣ್ಣನೆಯ ಧ್ವನಿಯಲ್ಲೇ ಕನ್ನಡತನ ಸಾರುತ್ತಿದ್ದಾರೆ.
ಹಿಂದಿಯಲ್ಲಿ ಕೆಜಿಎಫ್ ಪ್ರಚಾರ ಕಾರ್ಯಕ್ರಮದಲ್ಲಿ ಆಂಕರ್ ಒಬ್ಬರು ಯಶ್ ಎದುರು ಒಂದು ಪ್ರಶ್ನೆ ಇಟ್ಟಿದ್ದರು. ನೀವು ಮುಂದೆ ಬಾಲಿವುಡ್‍ಗೆ ಬರುತ್ತೀರಾ? ಹಿಂದಿ ಸಿನಿಮಾಗಳನ್ನಷ್ಟೇ ಮಾಡ್ತೀರಾ? ಅನ್ನೋ ಪ್ರಶ್ನೆಗೆ ಯಶ್ ಕೊಟ್ಟಿದ್ದ ಉತ್ತರವೇನು ಗೊತ್ತೇ?
ನಾನು ಮುಂದೆಯೂ ಕನ್ನಡದಲ್ಲೇ ಸಿನಿಮಾ ಮಾಡ್ತೇನೆ. ಆ ಸಿನಿಮಾಗಳನ್ನೇ ಹಿಂದಿಗೂ ತರುತ್ತೇನೆ ಎಂದಿದ್ದರು.
ಆಂಧ್ರದಲ್ಲಿ ವಿತರಕ ದಿಲ್ ರಾಜು ಕನ್ನಡ ಸಿನಿಮಾಗಳ ಬಜೆಟ್ ಮತ್ತು ಕಲೆಕ್ಷನ್ ಬಗ್ಗೆ ಕೇವಲವೇನೋ ಅನ್ನೋ ರೀತಿಯಲ್ಲಿ ಮಾತನಾಡಿದಾಗಲೂ ಅಷ್ಟೆ. ಕನ್ನಡ ಚಿತ್ರಗಳ ಬಜೆಟ್ ಮತ್ತು ಕಲೆಕ್ಷನ್ ಕುರಿತು ಪುಟ್ಟ ಭಾಷಣವನ್ನೇ ಮಾಡಿದ್ದ ಯಶ್ ವೇದಿಕೆಯಲ್ಲೇ ಕನ್ನಡ ಯಾರಿಗೂ.. ಯಾವುದಕ್ಕೂ ಕಡಿಮೆ ಇಲ್ಲ ಎಂದು ಸಾರಿದ್ದರು.
ನಾನು ಬೇರೆ ಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕನ್ನಡದಷ್ಟು ಸುಲಲಿತವಾಗಿ ಬೇರೆ ಭಾಷೆಗಳು ಬರಲ್ಲ ಎಂದು ಹೇಳಿದ್ದ ಯಶ್ ಈಗ ಅಲ್ಲು ಅರ್ಜುನ್ ಅವರಿಗೆ ಧನ್ಯವಾದ ಹೇಳುವಾಗಲೂ ಕನ್ನಡತನ ಬಿಟ್ಟುಕೊಟ್ಟಿಲ್ಲ. ಅಲ್ಲು ಅರ್ಜುನ್ ಯಶ್ ಅವರಿಗೆ ವಿಶ್ ಮಾಡುತ್ತಾ ಯಶ್`ಗಾರು' ಎಂದು ಬಳಸಿದ್ದರು. ಗಾರು ಅನ್ನೋದು ತೆಲುಗಿನಲ್ಲಿ ಗೌರವ ಸೂಚಕ ಬಹುವಚನ ಪದ. ಅದಕ್ಕೆ ಅಲ್ಲು ಅರ್ಜುನ್ ಗಾರು ಎಂದು ಉತ್ತರ ಕೊಟ್ಟಿದ್ದರೆ ತೆಲುಗರೂ ಖುಷಿಯಾಗುತ್ತಿದ್ದರು. ಅದರೆ.. ಅಲ್ಲಿ ಪ್ರತಿಕ್ರಿಯೆ ಕೊಡುವಾಗ ಅಲ್ಲು ಅರ್ಜುನ್ `ಅವರೇ' ಎಂದು ಬಳಸಿರೋ ಯಶ್ ತಣ್ಣನೆಯ ಧ್ವನಿಯಲ್ಲೇ ಕನ್ನಡತನ ಸಾರಿದ್ದಾರೆ.
ಅಂದ ಹಾಗೆ ಇದು ಹೆಮ್ಮೆ ಎಂದೋ... ನೋಡು ನಮ್ ಹುಡ್ಗ ಹೆಂಗೆ ಎಂದೋ ಎದೆಯುಬ್ಬಿಸಿ ಹೇಳಿ ಇನ್ನೊಬ್ಬರನ್ನು ಕೆಣಕುವ ರೀತಿಯೂ ಅಲ್ಲ. ಕೆಣಕಿ ಕೌಂಟರ್ ಕೊಟ್ಟರೆ ಕನ್ನಡ ಬೆಳೆಯಲ್ಲ. ಬೆಳೆಯಬೇಕಿರೋದು ಹೀಗೆ.. ಪ್ರೀತಿಯಿಂದ.. ಸ್ನೇಹದಿಂದ..