1100 ಕೋಟಿ. ಇದು ಆರ್.ಆರ್.ಆರ್. ಚಿತ್ರದ ದಾಖಲೆ ಕಲೆಕ್ಷನ್. ಕೊರೊನಾ ಮುಗಿದ ನಂತರ ಚೇತರಿಕೆ ಕಾಣದೆ ತತ್ತರಿಸಿದ್ದ ಭಾರತೀಯ ಚಿತ್ರರಂಗಕ್ಕೆ ಆಕ್ಸಿಜನ್ ಕೊಟ್ಟಿದ್ದು ಆರ್.ಆರ್.ಆರ್. ಈಗ ಅದನ್ನೂ ಮೀರಿ ಸಂಚಲನ ಸೃಷ್ಟಿಸಿ ಬಿರುಗಾಳಿ ಎಬ್ಬಿಸಿ ಮುನ್ನುಗ್ಗುತ್ತಿರೋದು ಕೆಜಿಎಫ್ ಚಾಪ್ಟರ್ 2. ಕೆಜಿಎಫ್ ಬಾಕ್ಸಾಫೀಸ್ ಕಲೆಕ್ಷನ್ ಈಗ 800 ಕೋಟಿ ದಾಟಿದೆ. ಈ ವಾರಾಂತ್ಯದ ಒಳಗೆ ಆರ್.ಆರ್.ಆರ್.ನ್ನು ಮೀರಿಸಿ ಮುನ್ನುಗ್ಗಿದರೂ ಆಶ್ಚರ್ಯವಿಲ್ಲ.
ಹಿಂದಿಯಲ್ಲಿ ಈಗಾಗಲೇ ಆರ್.ಆರ್.ಆರ್. ದಾಖಲೆ ಹಿಂದಿಕ್ಕಿದೆ ಕೆಜಿಎಫ್. ಆರ್.ಆರ್.ಆರ್. ಹಿಂದಿಯಲ್ಲಿ 250 ಕೋಟಿಯ ಗಡಿ ದಾಟಿದ್ದು ರಿಲೀಸ್ ಆದ 23ನೇ ದಿನಕ್ಕೆ. ಆದರೆ ಕೆಜಿಎಫ್ ಅದನ್ನು ಮೊದಲ ವಾರದ ಕೊನೆಯ ಹೊತ್ತಿಗೆ ದಾಟಿಯಾಗಿತ್ತು.
ಅತ್ತ ತಮಿಳುನಾಡು ಹಾಗೂ ಕೇರಳದಲ್ಲಿ ಅಲ್ಲಿನ ಸ್ಥಳೀಯ ಚಿತ್ರಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿರುವುದೂ ಕೆಜಿಎಫ್ ಸಾಧನೆಯೇ. ತಮಿಳುನಾಡಿನಲ್ಲಿಯೇ ತಮಿಳಿನ ವಿಜಯ್ ಅಭಿನಯದ ಬೀಸ್ಟ್ ಚಿತ್ರದ ಗಳಿಕೆಯನ್ನೂ ಮೀರಿಸಿ ದಾಖಲೆ ಬರೆಯುತ್ತಿದೆ ಕೆಜಿಎಫ್.
ಇದೆಲ್ಲದರ ಮಧ್ಯೆ ಕೆಜಿಎಫ್‍ನ್ನು ಕನ್ನಡದಲ್ಲಿ ನೋಡಿದವರ ಸಂಖ್ಯೆಗಿಂತ ತೆಲುಗಿನಲ್ಲಿ ನೋಡಿದವರ ಸಂಖ್ಯೆಯೇ ಹೆಚ್ಚು. ಒಂದು ಲೆಕ್ಕಾಚಾರದ ಪ್ರಕಾರ ಕರ್ನಾಟಕದಲ್ಲಿ ಕನ್ನಡದಲ್ಲಿ ಕೆಜಿಎಫ್ ನೋಡಿದವರ ಸಂಖ್ಯೆ 40 ಲಕ್ಷವಾದರೆ, ತೆಲುಗಿನಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಚಿತ್ರವನ್ನು ನೋಡಿದವರ ಸಂಖ್ಯೆ 50 ಲಕ್ಷಕ್ಕೂ ಹೆಚ್ಚು.
ದಕ್ಷಿಣ ಭಾರತದಲ್ಲಿ ಮಾರಾಟವಾದ ಟಿಕೆಟ್ ಸಂಖ್ಯೆ 1.5 ಕೋಟಿಯಾದರೆ, ಉತ್ತರ ಭಾರತದಲ್ಲಿ ಸೇಲ್ ಆದ ಕೆಜಿಎಫ್ ಟಿಕೆಟ್ ಸಂಖ್ಯೆ 1.7 ಕೋಟಿಗೂ ಹೆಚ್ಚು. ಇದು ಮೊದಲ ವಾರದ ರಿಪೋರ್ಟ್ ಮಾತ್ರ.