ಯಶ್ ಕಥೆ ಹೇಳೋದ್ರಲ್ಲಿ ಎತ್ತಿದ ಕೈ. ಅಷ್ಟು ಓದಿರೋ ಯಶ್‍ಗೆ ಕಥೆಗಳು ಬಾಯಲ್ಲಿವೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುವಾಗ ಚೀನಾದ ಒಂದು ವಿಶೇಷ ಬಿದಿರಿನ ಕಥೆ ಹೇಳಿದ್ದರು ಯಶ್. ಆ ಬಿದಿರು ಬಿತ್ತನೆ ಮಾಡಿದ ನಂತರ ಸುಮಾರು 3 ವರ್ಷ ಮೊಳಕೆ ಕೂಡಾ ಕಾಣಿಸಲ್ಲ. ಆದರೆ 3 ವರ್ಷ ಕಳೆದ ನಂತರ ದಿಢೀರನೆ ಕೇವಲ ಮೂರ್ನಾಲ್ಕು ತಿಂಗಳಲ್ಲಿ 6 ರಿಂದ 12 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತೆ. ಆ ಮೂರು ವರ್ಷ ಆ ಬೀಜ.. ಇಷ್ಟು ಎತ್ತರ ಬೆಳೆಯೋಕೆ ಬೇಕಾದ ಬೇರುಗಳನ್ನು ಭೂಮಿಯ ಒಳಗೆ ಇಳಿಸಿರುತ್ತೆ ಎಂದಿದ್ದರು ಯಶ್. ಕೆಜಿಎಫ್‍ಗೆ ಏಕೆ ಅಷ್ಟು ವರ್ಷ ತೆಗೆದಿಟ್ಟಿರಿ ಅನ್ನೋ ಪ್ರಶ್ನೆಗೆ ಯಶ್ ಕೊಟ್ಟಿದ್ದ ಉತ್ತರ ಅದು.
ಈಗ ಕೆಜಿಎಫ್ ಗೆದ್ದಾಗಿದೆ. ಅದಕ್ಕೂ ಯಶ್ ಒಂದು ಚೆಂದದ ಕಥೆ ಹೇಳಿದ್ದಾರೆ.
ಒಂದೂರಲ್ಲಿ ಬರ ಬಂದು ಎಲ್ಲರನ್ನೂ ಕಂಗಾಲು ಮಾಡಿತು. ಮಳೆ ಬಂದರೆ ಎಲ್ಲವೂ ಸರಿ ಹೋಗುತ್ತಿತ್ತು. ಆಗ ಊರಿನ ಜನರೆಲ್ಲ ಸೇರಿ ಒಟ್ಟಾಗಿ ದೇವರನ್ನು ಪ್ರಾರ್ಥನೆ ಮಾಡಲು ನಿರ್ಧರಿಸಿದರು. ಹಾಗೆ ಪ್ರಾರ್ಥಿಸಿದರೆ ಮಳೆ ಬರುತ್ತೆ ಅನ್ನೋದು ನಂಬಿಕೆ. ಆ ನಂಬಿಕೆಯೊಂದಿಗೆ ಹಲವರು ಬಂದರು. ಆದರೆ ಒಬ್ಬ ಹುಡುಗ ಮಾತ್ರ ಕೊಡೆ ಹಿಡಿದು ಬಂದಿದ್ದ. ಅವನನ್ನು ಕೆಲವರು ಆಡಿಕೊಂಡರು. ಓವರ್ ಕಾನ್ಫಿಡೆನ್ಸ್ ಎಂದರು. ಆದರೆ ಆ ಹುಡುಗನಲ್ಲಿದ್ದದ್ದು ನಂಬಿಕೆ ಮಾತ್ರ. ನಾನೂ ಆ ಹುಡುಗನಂತೆ. ಆ ನಂಬಿಕೆಗೆ ನೀವು ಪ್ರೀತಿಯ ಮಳೆ ಸುರಿಸಿದ್ದೀರಿ. ಇಡೀ ಕೆಜಿಎಫ್ ಟೀಂ ಪರವಾಗಿ ನಿಮಗೆ ನನ್ನ ಕೃತಜ್ಞತೆಗಳು. ನಮ್ಮ ಪ್ರಯತ್ನಕ್ಕೆ ಸಾರ್ಥಕತೆ ತುಂಬಿದ್ದೀರಿ. ನಿಮ್ಮ ಹೃದಯವೇ ನಮ್ಮ ಟೆರಿಟರಿ ಎಂದಿದ್ದಾರೆ ಯಶ್.
ಕೆಜಿಎಫ್ ರಿಲೀಸ್ ನಂತರ ಕುಟುಂಬದೊಂದಿಗೆ ವಿದೇಶಕ್ಕೆ ತೆರಳಿರುವ ಯಶ್ ಪತ್ನಿ ರಾಧಿಕಾ ಹಾಗೂ ಮಕ್ಕಳೊಂದಿಗೆ ರಿಲ್ಯಾಕ್ಸ್ ಆಗುತ್ತಿದ್ದಾರೆ.