ಅಪ್ಪು ಹೀರೋ ಆಗಿ ನಟಿಸಿದ್ದ ಕೊನೆಯ ಸಿನಿಮಾ ಜೇಮ್ಸ್. ಮಾರ್ಚ್ 18ರ ಅಪ್ಪು ಹುಟ್ಟುಹಬ್ಬದ ದಿನವೇ ರಿಲೀಸ್ ಆಗಿ, ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆದಾಯ್ತು. 5ನೇ ವಾರದ ವೇಳೆಗೆ ಜೇಮ್ಸ್, ಈಗ ಒಟಿಟಿಯಲ್ಲೂ ಲಭ್ಯವಿದೆ. ಒಟಿಟಿಯಲ್ಲೂ ಟ್ರೆಂಡ್ ಸೃಷ್ಟಿಸಿರೋ ಜೇಮ್ಸ್‍ನ್ನು ಮತ್ತೊಮ್ಮೆ ಬಿಡುಗಡೆ ಮಾಡೋಕೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮುಂದಾಗಿದ್ದಾರೆ.
ಜೇಮ್ಸ್ ಡಬ್ಬಿಂಗ್ ವೇಳೆ ಅಪ್ಪು ಧ್ವನಿಯನ್ನೇ ಬಳಸಿಕೊಳ್ಳೋಕೆ ಚಿತ್ರತಂಡ ಹರಸಾಹಸ ಮಾಡಿತ್ತು. ಆದರೆ, ಸರಿಯಾದ ಸಮಯಕ್ಕೆ ಸಿಗಲಿಲ್ಲ. ತಾಂತ್ರಿಕ ಸಂಸ್ಥೆಯೊಂದಕ್ಕೆ ಪುನೀತ್ ಅವರ ಧ್ವನಿಯ ಸುಮಾರು 15 ಗಂಟೆಗಳ ಸಂಗ್ರಹವನ್ನು ಕೊಡಲಾಗಿತ್ತು. ಈ ಸಾಹಸವನ್ನು ಕೈಗೆತ್ತಿಕೊಂಡವರು ಸೌಂಡ್ ಇಂಜಿನಿಯರ್ ಶ್ರೀನಿವಾಸ ರಾವ್. ಹೈದರಾಬಾದ್‍ನವರು. ನಟ ಶ್ರೀಕಾಂತ್ ಇವರನ್ನು ಕಿಶೋರ್ ಅವರಿಗೆ ಪರಿಚಯಿಸಿದರಂತೆ.
ಪುನೀತ್ ಜೇಮ್ಸ್ ಚಿತ್ರದ ಶೂಟಿಂಗ್ ಸಮಯದಲ್ಲಿ ಸೇರಿದಂತೆ ವಿವಿಧ ಚಿತ್ರಗಳಲ್ಲಿನ ರಾ ವಾಯ್ಸ್ ಫುಟೇಜ್, ರಿಯಾಲಿಟಿ ಶೋಗಳಲ್ಲಿನ ರಾ ವಾಯ್ಸ್ ಫುಟೇಜ್ ಎಲ್ಲವನ್ನೂ ಪಡೆದುಕೊಂಡಿದ್ದ ಶ್ರೀನಿವಾಸ ರಾವ್, ಅದರ ಮೇಲೆ ಸತತ 6 ತಿಂಗಳು ಕೆಲಸ ಮಾಡಿ, ಕೊನೆಗೂ ಅಪ್ಪು ಧ್ವನಿಯನ್ನು ಚಿತ್ರಕ್ಕೆ ಹೊಂದಿಸಿದ್ದಾರೆ. ಇದಕ್ಕಾಗಿ ಶ್ರೀನಿವಾಸ ರಾವ್ ಅವರ 61 ಮಂದಿಯ ತಂಡ ಕೆಲಸ ಮಾಡಿದೆ.
ಚಿತ್ರದ ರಿಲೀಸ್ ವೇಳೆ ಶಿವಣ್ಣ ಅವರಿಂದ ಡಬ್ ಮಾಡಿಸಲಾಗಿತ್ತು. ನಿರ್ದೇಶಕ ಚೇತನ್ ಕುಮಾರ್ ಅದನ್ನು ಯಶಸ್ವಿಯಾಗಿ ಮಾಡಿದ್ದರು. ಪ್ರೇಕ್ಷಕರೂ ಇಷ್ಟಪಟ್ಟಿದ್ದರು. ಈಗ ಅಪ್ಪು ಅವರ ಧ್ವನಿಯನ್ನೇ ಚಿತ್ರಕ್ಕೆ ಮರುಸೃಷ್ಟಿಸಲಾಗಿದ್ದು, ಶಿವಣ್ಣ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರದ ಕ್ಲಿಪ್ಪಿಂಗ್‍ಗಳನ್ನು ನೋಡಿದ್ದಾರೆ ಎಂದು ತಿಳಿಸಿದ್ದಾರೆ ಕಿಶೋರ್ ಪತ್ತಿಕೊಂಡ. 5ನೇ ವಾರವೂ ಜೇಮ್ಸ್ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, 61 ಸಿಂಗಲ್ ಸ್ಕ್ರೀನ್ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಶೋ ಆಗುತ್ತಿದೆ. ಏಪ್ರಿಲ್ 22ರಿಂದ ಅಪ್ಪು ಧ್ವನಿಯಲ್ಲಿ ಚಿತ್ರ ರೀ ರಿಲೀಸ್ ಆಗಲಿದೆ. ನಂತರ ಜನರ ಪ್ರತಿಕ್ರಿಯೆ ನೋಡಿಕೊಂಡು ಥಿಯೇಟರ್ಸ್ ಅಥವಾ ಶೋ ಹೆಚ್ಚಿಸುವ ಬಗ್ಗೆ ತೀರ್ಮಾನಿಸುತ್ತೇವೆ ಎಂದಿದ್ದಾರೆ ಕಿಶೋರ್ ಪತ್ತಿಕೊಂಡ.