134 ಕೋಟಿ. ಇದು ಹೊಂಬಾಳೆಯವರೇ ಹೊರಗೆ ಬಿಟ್ಟ ಅಧಿಕೃತ ಲೆಕ್ಕಾಚಾರ. ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಕೆಜಿಎಫ್ ಚಾಪ್ಟರ್ 2. ರಾಕಿಂಗ್ ಸ್ಟಾರ್ ಯಶ್ ಫುಲ್ ರಾಕಿಂಗ್. ಪ್ರಶಾಂತ್ ನೀಲ್ ಅವರ ಝೀಲ್ ಡಬಲ್ ಆಗಿದ್ದರೆ, ಫುಲ್ ಖುಷಿಯಾಗಿರೋದು ವಿಜಯ್ ಕಿರಗಂದೂರು. 134 ಕೋಟಿಯನ್ನು ಮೊದಲ ದಿನವೇ ಗಳಿಸಿದ ಕೆಜಿಎಫ್‍ನ ಮೊದಲ 4 ದಿನದ ಎಲ್ಲ ಶೋಗಳೂ ಬುಕ್ ಆಗಿರುವುದು ವಿಶೇಷ. ಅಲ್ಲಿಗೆ ಭಾನುವಾರದವರೆಗೆ ಕೆಜಿಎಫ್‍ಗೆ ಎದುರಾಳಿಗಳೇ ಇಲ್ಲ. ಈ 134 ಕೋಟಿಯಲ್ಲಿ ವಿದೇಶದ ಎಲ್ಲ 75 ದೇಶಗಳ ಬಾಕ್ಸಾಫೀಸ್ ಲೆಕ್ಕಾಚಾರ ಸಿಕ್ಕಿಲ್ಲ. ಈಗ ಬರುತ್ತಿರೋ ವರದಿಗಳ ಪ್ರಕಾರ ವಿಶ್ವದಾದ್ಯಂತ ಮೊದಲ ದಿನದ ಗಳಿಕೆ 165 ಕೋಟಿ ದಾಟಿದೆ. ಈ ಹಾದಿಯಲ್ಲಿ ಕೆಜಿಎಫ್ ಸೃಷ್ಟಿಸಿದ ದಾಖಲೆಗಳನ್ನೊಮ್ಮೆ ನೋಡೋಣ.
ಕರ್ನಾಟಕದಲ್ಲೀಗ ಮೊದಲ ದಿನವೇ ಅತೀ ಹೆಚ್ಚು ದುಡಿದ ದಾಖಲೆ ಈಗ ಕೆಜಿಎಫ್ ಚಾಪ್ಟರ್ 2ನದ್ದು.
ವಿಶ್ವದಾದ್ಯಂತ ಮೊದಲ ದಿನವೇ ದೊಡ್ಡ ಗಳಿಕೆ ಮಾಡಿದ ಚಿತ್ರಗಳ ಸಾಲಿನಲ್ಲಿ ಕೆಜಿಎಫ್‍ನದ್ದು 3ನೇ ಸ್ಥಾನ. ಮೊದಲ 2 ಸ್ಥಾನದಲ್ಲಿರೋದು ಬಾಹುಬಲಿ ಮತ್ತು ಆರ್.ಆರ್.ಆರ್.
ಆಂಧ್ರ ಮತ್ತು ತೆಲಂಗಾಣದಲ್ಲಿ ಆರ್.ಆರ್.ಆರ್. ದಾಖಲೆಯ ಸಮೀಪಕ್ಕೆ ಹೋಗಿದೆ. ಕರ್ನಾಟಕಕ್ಕಿಂತ ಹೆಚ್ಚು ಜನ ಅಲ್ಲಿ ಸಿನಿಮಾ ನೋಡಿದ್ದರೂ, ಗಳಿಕೆ ಕರ್ನಾಟಕಕ್ಕಿಂತ ಕಡಿಮೆ. ಕಾರಣ ಇಷ್ಟೆ. ಅಲ್ಲಿನ ಜಗನ್ ಸರ್ಕಾರ ಟಿಕೆಟ್ ದರವನ್ನು ಇಲ್ಲಿನಂತೆ ಏರಿಸೋಕೆ ಅವಕಾಶ ಕೊಟ್ಟಿಲ್ಲ. ಗರಿಷ್ಠ 250 ರೂ. ಅಷ್ಟೆ.
ಕೇರಳದಲ್ಲಿ ಬೀಸ್ಟ್ ಸ್ಕ್ರೀನ್‍ಗಳ ಸಂಖ್ಯೆ ಡೌನ್ ಆಗಿದ್ದರೆ, ಕೆಜಿಎಫ್ ಸ್ಕ್ರೀನ್ ಸಂಖ್ಯೆ ತ್ರಿಬಲ್ ಆಗಿದೆ.
ತಮಿಳುನಾಡಿನಲ್ಲಿ 2 ಮತ್ತು 3ನೇ ದಿನವೂ ಮಧ್ಯರಾತ್ರಿ ಶೋ ನಡೆಯುತ್ತಿವೆ. ವಿಶೇಷವೆಂದರೆ ಅಲ್ಲಿಯೂ ಬೀಸ್ಟ್ ಸ್ಕ್ರೀನ್ ಕಡಿಮೆಯಾಗಿದ್ದು, ಕೆಜಿಎಫ್ ಶೋಗಳ ಸಂಖ್ಯೆ ಹೆಚ್ಚಾಗಿದೆ.
ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಕರ್ನಾಟಕದಲ್ಲಿ ಎಲ್ಲ ಭಾಷೆಗಳ ಶೋಗಳೂ ಹೌಸ್‍ಫುಲ್.
ಹಿಂದಿಯಲ್ಲಿ ಮೊದಲ ದಿನವೇ 50 ಕೋಟಿ ದಾಟಿರೋ ಕೆಜಿಎಫ್, ಚಾಪ್ಟರ್ 1ನ ಲೈಫ್‍ಟೈಂ ಗಳಿಕೆಯನ್ನು ಮೊದಲ ದಿನವೇ ದಾಟಿಬಿಟ್ಟಿದೆ. ಚಾಪ್ಟರ್ 1, ಹಿಂದಿಯಲ್ಲಿ ಒಟ್ಟಾರೆ 44 ಕೋಟಿ ಬಿಸಿನೆಸ್ ಮಾಡಿತ್ತು. ಈಗ ಮೊದಲ ದಿನವೇ 54 ಕೋಟಿ ಬಿಸಿನೆಸ್ ಮಾಡಿದೆ.
ಹಿಂದಿಯಲ್ಲಿ 54 ಕೋಟಿ, ಕನ್ನಡದಲ್ಲಿ 35 ಕೋಟಿ, ತೆಲುಗಿನಲ್ಲಿ 30 ಕೋಟಿ, ತಮಿಳಿನಲ್ಲಿ 9 ಕೋಟಿ ಹಾಗೂ ಮಲಯಾಳಂನಲ್ಲಿ 8 ಕೋಟಿ ಫಸ್ಟ್ ಡೇ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಅಮೆರಿಕದಲ್ಲಿಯೂ ದಾಖಲೆ ಬರೆದಿರೋ ಕೆಜಿಎಫ್‍ನ ಒಟ್ಟಾರೆ ಫಾರಿನ್ ಬಾಕ್ಸಾಫೀಸ್ ಲೆಕ್ಕ 30 ಕೋಟಿಗೂ ಹೆಚ್ಚು.