Print 
yash, prashanth neel, vijay kirgandur, srinidhi shetty, kgf chapter 2,

User Rating: 5 / 5

Star activeStar activeStar activeStar activeStar active
 
ಆಂಧ್ರದ ಆ ರೂಲ್ಸ್ ಕೆಜಿಎಫ್ ಚಾಪ್ಟರ್ 2ಗೆ ಶಾಕ್. ಪ್ರೇಕ್ಷಕರು ರಾಕ್ಸ್
KGF Chapter 2 Movie Image

ಕೆಜಿಎಫ್ ಚಾಪ್ಟರ್ 2. ಕನ್ನಡ ಚಿತ್ರರಂಗದ ದುಬಾರಿ ಬಜೆಟ್‍ನ ಸಿನಿಮಾ. ಒಟ್ಟಾರೆ ಬಜೆಟ್ ಎಷ್ಟಿರಬಹುದು ಅನ್ನೋ ಅಧಿಕೃತ ಲೆಕ್ಕ ಸಿಕ್ಕಿಲ್ಲವಾದರೂ, ಅದು ಮೂರಂಕಿಯ ಮೇಲಿದೆ ಅನ್ನೋದ್ರಲ್ಲಿ ಅನುಮಾನವೇನಿಲ್ಲ. ಹೊಂಬಾಳೆ, ಪ್ರಶಾಂತ್ ನೀಲ್, ರಾಕಿಭಾಯ್ ಯಶ್, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ಅಚ್ಯುತ್ ಕುಮಾರ್.. ಹೀಗೆ ಎಲ್ಲ ದೊಡ್ಡ ದೊಡ್ಡ ನಟರೇ ಇರುವಾಗ.. ಖರ್ಚೂ ಜಾಸ್ತಿ. ಇನ್ನು ಸೆಟ್ಟು, ಮ್ಯೂಸಿಕ್ಕು ಎಲ್ಲವನ್ನೂ ಬೆಸ್ಟ್ ಕ್ವಾಲಿಟಿಯಲ್ಲೇ ಕೊಟ್ಟಿರೋ ಹೊಂಬಾಳೆಯ ಬಜೆಟ್ ಸಹಜವಾಗಿಯೇ ದೊಡ್ಡದು.

ಕೆಜಿಎಫ್ ಚಾಪ್ಟರ್ 1 ಹಿಟ್ ಆದ ನಂತರ ಯಶ್ ನ್ಯಾಷನಲ್ ಸ್ಟಾರ್ ಆದರು. ಕನ್ನಡದಲ್ಲಿರುವಷ್ಟೇ ಕ್ರೇಜ್ ಯಶ್ ಅವರಿಗೆ ತೆಲುಗು ಮತ್ತು ಹಿಂದಿಯಲ್ಲಿ ಸೃಷ್ಟಿಯಾಯ್ತು. ತೆಲುಗಿನ ಮಾರ್ಕೆಟ್ ದೊಡ್ಡದು. ಅಲ್ಲಿ ಸಿನಿಮಾ ನೋಡಿದವರ ಸಂಖ್ಯೆ ಕರ್ನಾಟಕಕ್ಕಿಂತ ಹೆಚ್ಚು. ಏಕೆಂದರೆ ಅದು 2 ರಾಜ್ಯ. ಜನಸಂಖ್ಯೆ ಹಾಗೂ ಸ್ಕ್ರೀನ್‍ಗಳ ಸಂಖ್ಯೆಯೂ ಹೆಚ್ಚು. ಇಷ್ಟೆಲ್ಲ ಇದ್ದರೂ ಗಳಿಕೆ ಮಾತ್ರ ಕನ್ನಡಕ್ಕಿಂತ ಕಡಿಮೆ. ಕರ್ನಾಟಕದ ಗಳಿಕೆ 35 ಕೋಟಿಯಾದರೆ, ತೆಲುಗು ಮಾರ್ಕೆಟ್‍ನ ಒಟ್ಟಾರೆ ಫಸ್ಟ್ ಡೇ ಕಲೆಕ್ಷನ್ 30 ಕೋಟಿ. ಹೀಗೇಕೆ ಎಂದು ಹುಡುಕಿದರೆ ಉತ್ತರ ಸಿಗೋದು ಆಂಧ್ರಪ್ರದೇಶ ಸಿಎಂ ಜಗನ್ ಅವರ ಒಂದು ರೂಲ್ಸ್‍ನಲ್ಲಿ. ತೆಲಂಗಾಣಕ್ಕೆ ಹೋಲಿಸಿದರೆ ಆಂಧ್ರದ ಮಾರ್ಕೆಟ್ ದೊಡ್ಡದು.

ಆಂಧ್ರದಲ್ಲಿ ಟಿಕೆಟ್ ರೇಟ್ ಅದು ಯಾವುದೇ ಮಲ್ಟಿಪ್ಲೆಕ್ಸ್ ಇರಲಿ, 125 ರೂ.ನಿಂದ 250 ರೂ. ಗರಿಷ್ಠ ಬೆಲೆ. ಸಿಂಗಲ್ ಸ್ಕ್ರೀನ್ ಥಿಯೇಟರುಗಳ ಟಿಕೆಟ್ ಬೆಲೆ 70ರಿಂದ 100 ರೂ. ಎಸಿಯಿಲ್ಲದ ಥಿಯೇಟರುಗಳಲ್ಲಿ 40 ರೂ.ನಿಂದ 60 ರೂ. ಅಷ್ಟೆ. ಅಕಸ್ಮಾತ್ ಟಿಕೆಟ್ ದರ ಹೆಚ್ಚಿಸಬೇಕು ಎಂದರೆ ಚಿತ್ರಗಳ ನಿರ್ಮಾಪಕರು ಸರ್ಕಾರಕ್ಕೆ ಮೊದಲೇ ಮನವಿ ಮಾಡಬೇಕು. ಅಂತಹ ಚಿತ್ರಗಳ ಬಜೆಟ್ 100 ಕೋಟಿಗೂ ಜಾಸ್ತಿ ಇರಬೇಕು. ಆ 100 ಕೋಟಿ+ ಬಜೆಟ್‍ನಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಸಂಭಾವನೆ ಲೆಕ್ಕಕ್ಕೆ ಬರುವುದಿಲ್ಲ. ಕೇವಲ ಸಿನಿಮಾ ನಿರ್ಮಾಣದ ಖರ್ಚು ಮಾತ್ರ ಇರಬೇಕು.

ಇದರಿಂದಾಗಿ ಆಂಧ್ರದಲ್ಲಿ 250 ರೂ.ಗಿಂತ ಹೆಚ್ಚು ದರಕ್ಕೆ ಟಿಕೆಟ್ ಮಾರಲು ಅವಕಾಶವೇ ಆಗಲಿಲ್ಲ. ಆದರೆ ಕರ್ನಾಟಕದಲ್ಲಿ ಹಾಗಲ್ಲ. 250 ರೂ.ಗೆ ಒಂದೂ ಟಿಕೆಟ್ ಸಿಗಲಿಲ್ಲ. ಮಿನಿಮಮ್ 500 ರೂ.ನಿಂದ 2000 ರೂ. ವರೆಗೂ ಟಿಕೆಟ್ ದರವಿತ್ತು.

ಇದು ನಿರ್ಮಾಪಕರಿಗೆ ಲಾಭವಾಗಬಹುದಾದರೂ, ಟಿಕೆಟ್ ದರ ಹೆಚ್ಚಿದಷ್ಟೂ ಫ್ಯಾಮಿಲಿ ಆಡಿಯನ್ಸ್ ಕಡಿಮೆಯಾಗುತ್ತಾರೆ. ಇದು ವಾಸ್ತವ. ಕನಿಷ್ಠ 5 ಜನರ ಒಂದು ಫ್ಯಾಮಿಲಿ ಸಿನಿಮಾಗೆ ಬರಬೇಕೆಂದರೆ ಕನಿಷ್ಠವೆಂದರೂ 3 ಸಾವಿರ ಖರ್ಚು ಮಾಡಬೇಕಾಗುತ್ತದೆ. ಅದೇ ಆಂಧ್ರದಲ್ಲಿ ಗರಿಷ್ಠ 1500 ರೂ.ಗಳಲ್ಲಿ ಫ್ಯಾಮಿಲಿ ಥಿಯೇಟರ್ ಟ್ರಿಪ್ ಮುಗಿದು ಹೋಗುತ್ತದೆ. ಅದರಿಂದ ಆಗುವ ಲಾಭವೇನೆಂದರೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತದೆ. ಅರ್ಥಾತ್ ಗ್ರಾಹಕರು ಹೆಚ್ಚಿದಷ್ಟೂ.. ಬಿಸಿನೆಸ್ ಹೆಚ್ಚಿದಷ್ಟೂ.. ಆಗಲೂ ಲಾಭವಾಗುವುದು ನಿರ್ಮಾಪಕರಿಗೇ. ಅತ್ತ ಪ್ರೇಕ್ಷಕರೂ ಖುಷಿ.. ಇತ್ತ ನಿರ್ಮಾಪಕರೂ ಖುಷಿ.

ಆದರೆ ಕರ್ನಾಟಕದಲ್ಲಿ ಇದು ಸಾಧ್ಯವೇ ಇಲ್ಲ ಎನ್ನಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು 200 ರೂ.ಗೆ ಫಿಕ್ಸ್ ಮಾಡಿ ಆದೇಶ ಹೊರಡಿಸಿದ್ದರು. ಆದರೆ, ಅದನ್ನು ಜಾರಿಗೆ ತರುವುದಕ್ಕೆ ಮನಸ್ಸನ್ನೇ ಮಾಡಲಿಲ್ಲ.