` PVR, INOXಗಳದ್ದು ಅಹಂಕಾರವೋ..? ವ್ಯವಹಾರವೋ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
PVR, INOXಗಳದ್ದು ಅಹಂಕಾರವೋ..? ವ್ಯವಹಾರವೋ..?
KGF Chapter 2 Movie Image

ಕೆಜಿಎಫ್ ಚಾಪ್ಟರ್ 2. ಇಡೀ ದೇಶದ ಸಿನಿಮಾ ಪ್ರೇಮಿಗಳು ವರ್ಷಗಳಿಂದ ಎದುರು ನೋಡುತ್ತಿರೋ ಸಿನಿಮಾ. ನಮ್ಮ ಕನ್ನಡದ ಸಿನಿಮಾ. 75ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರೋ ಮೊತ್ತ ಮೊದಲ ಕನ್ನಡ ಸಿನಿಮಾ. ಈ ಚಿತ್ರಕ್ಕಾಗಿ ಬೇರೆ ಭಾಷೆಯ ಕೆಲವು ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‍ನ್ನೇ ಮುಂದಕ್ಕೆ ಹಾಕಿಕೊಂಡಿವೆ ಅನ್ನೋದೇ ಒಂದು ವಿಶೇಷ. ಹೀಗಿರುವಾಗ ದೇಶದೆಲ್ಲೆಡೆ ಬುಕ್ಕಿಂಗ್ ಓಪನ್ ಆಗಿರೋವಾಗ ಪಿವಿಆರ್ ಮತ್ತು ಐನಾಕ್ಸ್‍ಗಳಲ್ಲಿ ಮಾತ್ರ ಬುಕಿಂಗ್ ಆಗುತ್ತಿಲ್ಲ. ಯಾಕೆ?

ಪಿವಿಆರ್ ಮತ್ತು ಐನಾಕ್ಸ್‍ಗಳಲ್ಲಿ ಓಪನ್ ಆಗದೇ ಇರೋದು ಕರ್ನಾಟಕದಲ್ಲಿ ಮಾತ್ರ. ಉಳಿದಂತೆ ಬೇರೆಡೆ ಬುಕ್ಕಿಂಗ್ ಆಗುತ್ತಿದೆ. ಯಾಕೆ?

ಆಗಿರೋದು ಇಷ್ಟು.

ಪಿವಿಆರ್, ಐನಾಕ್ಸ್ ಮಲ್ಟಿಪ್ಲೆಕ್ಸ್‍ಗಳು ಸಿನಿಮಾ ಶೋ ಮಾಡುತ್ತವೆ. ಟಿಕೆಟ್ ಲಾಭಾಂಶವನ್ನು ನಿರ್ಮಾಪಕರಿಗೆ ನೀಡುತ್ತವೆ. ಆದರೆ, ಕನ್ನಡದ ಚಿತ್ರಗಳಿಗೆ ಮಾತ್ರ ಕಡಿಮೆ ಲಾಭಾಂಶ. ಹಿಂದಿ, ತಮಿಳು, ತೆಲುಗಿನವರಿಗೆ ಒಟ್ಟಾರೆ ವ್ಯವಹಾರದ ಶೇ.60ರಷ್ಟು (ಕೆಲವೊಮ್ಮೆ ಅದನ್ನೂ ಮೀರಿ) ಲಾಭಾಂಶ ನೀಡುವ ಪಿವಿಆರ್ ಮತ್ತು ಐನಾಕ್ಸ್, ಕನ್ನಡದ ಚಿತ್ರಗಳಿಗೆ ಶೇ.40ರಷ್ಟು ಲಾಭಾಂಶ ನೀಡುವುದಕ್ಕೂ ಹಿಂದೇಟು ಹಾಕುತ್ತವೆ. ಹಠ ಹಿಡಿದರೆ ಸಿನಿಮಾಗಳಿಗೆ ಸ್ಕ್ರೀನ್‍ನ್ನೇ ಕೊಡಲ್ಲ. ಸ್ಟಾರ್ ಚಿತ್ರಗಳಿಗೆ 50:50 ನಡೆಯುತ್ತೆ. ಅದೂ ಮೊದಲ ವಾರ ಮಾತ್ರ.

ಆದರೆ ಕೆಜಿಎಫ್‍ನವರು ಈ ಬಾರಿ ಬೇರೆ ಭಾಷೆಗಳಿಗೆ ನೀಡುವಂತೆ ಹೆಚ್ಚಿನ ಲಾಭಾಂಶ ನಮಗೂ ನೀಡಿ ಎನ್ನುತ್ತಿದ್ದಾರೆ. ಅವರು ಬಗ್ಗುತ್ತಿಲ್ಲ. ಬಂಡವಾಳ ಹೂಡಿದ ನಿರ್ಮಾಪಕನಷ್ಟೇ ಲಾಭಾಂಶವನ್ನು ಕೇವಲ ಪ್ರದರ್ಶನ ಮಾಡಿದ ಮಲ್ಟಿಪ್ಲೆಕ್ಸ್ ಪಡೆಯುತ್ತಿರೋದು ವ್ಯವಹಾರ ಅಲ್ಲ.

ಇಲ್ಲಿ ಬಿಸಿನೆಸ್ಸಿಗಿಂತ ಹೆಚ್ಚು ವರ್ಕೌಟ್ ಆಗುತ್ತಿರೋದು ಕನ್ನಡ ಸಿನಿಮಾ ತಾನೇ ಅನ್ನೋ ತಾತ್ಸಾರ ಮನೋಭಾವ. ಅದೂ ಕರ್ನಾಟಕದಲ್ಲಿಯೇ ಅನ್ನೋದು ಅವಮಾನವೂ ಹೌದು. ಕನ್ನಡ ಚಿತ್ರಗಳಿಗೆ ಸರಿಯಾದ ಸಮಯವನ್ನೂ ಕೊಡದೆ ಆಟವಾಡಿಸೋ, ಕನಿಷ್ಠ ಶುಚಿತ್ವದತ್ತಲೂ ಗಮನ ಕೊಡದೆ ಅವಮಾನಿಸುವ ಮಲ್ಟಿಪ್ಲೆಕ್ಸುಗಳು ಅತ್ತ ಲಾಭಾಂಶವನ್ನು ನಿರ್ಮಾಪಕರಿಗೆ ನೀಡೋಕೂ ಹಿಂದೆ ಮುಂದೆ ನೋಡುತ್ತವೆ ಅನ್ನೋ ಆರೋಪ ಇಂದು ನಿನ್ನೆಯದಲ್ಲ. ಅವರಿಗೆ ಅದು ಆಫ್ಟರಾಲ್ ಕನ್ನಡ ಸಿನಿಮಾ ಅಲ್ವಾ ಅನ್ನೋ ಭಾವನೆಯೇ ದೊಡ್ಡದಾಗಿದೆ ಅನ್ನೋದು ಹಲವರ ಆರೋಪ.

ಮೊದಲ ಬಾರಿಗೆ ಕೆಜಿಎಫ್`ನವರು ಹಠಕ್ಕೆ ಬಿದ್ದಿದ್ದಾರೆ. ಪಾಠ ಕಲಿಸೋ ಸಮಯ ಹತ್ತಿರ ಬಂತಾ? ಗೊತ್ತಿಲ್ಲ. ಸದ್ಯಕ್ಕಂತೂ ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್‍ಗಳಲ್ಲಿ ಪಿವಿಆರ್, ಐನಾಕ್ಸ್‍ಗಳಲ್ಲಿ ಟಿಕೆಟ್ ಬುಕ್ಕಿಂಗ್ ಆಗುತ್ತಿಲ್ಲ. ಬದಲಿಗೆ ಸಿಂಗಲ್ ಸ್ಕ್ರೀನ್‍ಗಳ ಸಂಖ್ಯೆಯನ್ನೇ  ಹೆಚ್ಚಿಸಲಾಗಿದೆ