` ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಯಾವುದು? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಯಾವುದು?
Mahishasura Mardini Movie Image

ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುವವರೆಗೆ ಪ್ಯಾನ್ ಇಂಡಿಯಾ ಅನ್ನೋ ಪದವನ್ನು ಕನ್ನಡಿಗರೂ ಕೇಳಿರಲಿಲ್ಲ. ಬಾಹುಬಲಿ ಬಂದಿತ್ತಾದರೂ, ಪ್ಯಾನ್ ಇಂಡಿಯಾ ಅನ್ನೋ ಟ್ಯಾಗ್ ಆ ಚಿತ್ರಕ್ಕೆ ಬಿದ್ದಿರಲಿಲ್ಲ. ಈಗ ಕೆಜಿಎಫ್ ಚಾಪ್ಟರ್ 2 ಜಗತ್ತಿನಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಇಷ್ಟಕ್ಕೂ ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಬೇರೇನಲ್ಲ. ಸಿಂಪಲ್ಲಾಗಿ ಹೇಳಬೇಕಂದ್ರೆ, ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ನಿರ್ಮಾಣ ಮಾಡಿ ರಿಲೀಸ್ ಮಾಡೋದು.

ಕೆಜಿಎಫ್ ಮತ್ತು ಬಾಹುಬಲಿ ಸಕ್ಸಸ್ ನಂತರ ಅದೇ ಹಾದಿಯಲ್ಲಿ ಹಲವು ಚಿತ್ರಗಳು ಬಂದಿವೆ. ಗೆದ್ದಿವೆ. ತೆಲುಗಿನಲ್ಲಿ ಸೈರಾ, ಪುಷ್ಪ, ಆರ್.ಆರ್.ಆರ್. ಚಿತ್ರಗಳದ್ದು ದೊಡ್ಡ ಹೆಸರು. ತಮಿಳಿನಲ್ಲಿ ಇನ್ನೂ ಅಂತಹ ಸಾಹಸಕ್ಕೆ ಕಮರ್ಷಿಯಲ್ ಲೆಕ್ಕದಲ್ಲಿ ಕೈ ಹಾಕದೇ ಇರೋಕೆ ಕಾರಣ, ತಮಿಳಿನ ವೊರಿಜಿನಲ್ ಮಾರ್ಕೆಟ್ಟು. ತಮಿಳಿನ ಮಾರ್ಕೆಟ್ ಹಿಂದಿಯಷ್ಟೇ ದೊಡ್ಡದು. ವಿದೇಶಗಳಲ್ಲೂ. ಮಲಯಾಳಂನವರದ್ದು ಕಥೆ ಆಧರಿತ ಚಿತ್ರಗಳು. ಸದ್ಯಕ್ಕೆ ಪ್ಯಾನ್ ಇಂಡಿಯಾ ಲಿಸ್ಟಿನಲ್ಲಿರೋದು ಕನ್ನಡ ಮತ್ತು ತೆಲುಗು ಚಿತ್ರಗಳು.

ಕನ್ನಡದಲ್ಲೀಗ ವಿಕ್ರಾಂತ್ ರೋಣ, ಕಬ್ಜ, 777 ಚಾರ್ಲಿ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿವೆ. ತೆಲುಗಿನಲ್ಲಿ ಸಲಾರ್, ಪುಷ್ಪ 2, ಆಚಾರ್ಯ ಚಿತ್ರಗಳಿವೆ. ಎಲ್ಲ ಓಕೆ, ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಯಾವುದು?

ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ ರಿಲೀಸ್ ಆದ ಶಾಂತಿ ಕ್ರಾಂತಿಯಾ..? ಅಲ್ಲ. ಹಲವು ಭಾಷೆಗಳಲ್ಲಿ ಸಕ್ಸಸ್ ಕಂಡ ಉಪೇಂದ್ರ ಚಿತ್ರವಾ.. ಅದೂ ಅಲ್ಲ. ಆ ದಾಖಲೆ ಇರೋದು ಒನ್ಸ್ ಎಗೇನ್ ಅಣ್ಣಾವ್ರ ಹೆಸರಲ್ಲೇ.

1959ರಲ್ಲಿ ಮಹಿಷಾಸುರ ಮರ್ಧಿನಿ ಚಿತ್ರ ರಿಲೀಸ್ ಆಗಿತ್ತು. ಒಟ್ಟು 8 ಭಾಷೆಗಳಲ್ಲಿ ಬಂದಿತ್ತು. ಡಾ.ರಾಜ್ ಕುಮಾರ್ ಮಹಿಷಾಸುರನ ಪಾತ್ರದಲ್ಲಿದ್ದರೆ, ಜಯಲಲಿತಾ ಅವರ ತಾಯಿ ಸಂಧ್ಯಾರಾಣಿ ಚಾಮುಂಡೇಶ್ವರಿ ಪಾತ್ರದಲ್ಲಿದ್ದರು. ಕೆ.ಎಸ್.ಅಶ್ವತ್ಥ್ ನಾರದನಾಗಿ, ಸಾಹುಕಾರ್ ಜಾನಕಿ ಮಹಿಷನ ಪತ್ನಿಯಾಗಿ ನಟಿಸಿದ್ದರು. ಬಿ.ಎಸ್.ರಂಗಾ ನಿರ್ದೇಶನದ ಚಿತ್ರ ಕನ್ನಡವೂ ಸೇರಿ ಒಟ್ಟು 8 ಭಾಷೆಗಳಲ್ಲಿ ಬಂದಿತ್ತು. ಉದಯ್ ಕುಮಾರ್, ನರಸಿಂಹರಾಜು ಕುಡಾ ನಟಿಸಿದ್ದರು. ಇದೇ ಚಿತ್ರದ ತುಂಬಿತು ಮನವ.. ಹಾಡಿನ ಮೂಲಕ ಡಾ.ರಾಜ್ ಗಾಯಕರಾಗಿ ಚಿತ್ರರಂಗಕ್ಕೆ ಪರಿಚಿತರಾದರು. ಕನ್ನಡದಲ್ಲಿ ರಾಜ್ ಹಾಡಿದ್ದ ಹಾಡನ್ನು ಹಿಂದಿಯಲ್ಲಿ ಸಂಗೀತ ಲೋಕದ ದಂತಕಥೆ ಮನ್ನಾಡೇ ಹಾಡಿದ್ದರು.

ಹಿಂದಿಯಲ್ಲಿ ದುರ್ಗಾ ಮಾತಾ ಎಂಬ ಹೆಸರಿನಲ್ಲಿ ರಿಲೀಸ್ ಆದರೆ, ಉಳಿದ ಭಾಷೆಗಳಲ್ಲಿ ಮಹಿಷಾಸುರ ಮರ್ದಿನಿ ಎಂದೇ ಡಬ್ ಆಗಿತ್ತು. ಆಂಧ್ರದಲ್ಲಿ ಸ್ವತಃ ಅಕ್ಕಿನೇನಿ ನಾಗೇಶ್ವರ ರಾವ್, ಡಾ.ರಾಜ್ ಕಟೌಟ್ ಹಾಕಿಸಿದ್ದರು. ಇವತ್ತಿಗೂ ಭಾರತೀಯ ಚಿತ್ರರಂಗ ಮಹಿಷಾಸುರ ಮರ್ದಿನಿ ಚಿತ್ರವನ್ನು ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂದೇ ಗುರುತಿಸುತ್ತದೆ.