ಬರ್ತಿರೋದೇ ದಾಖಲೆ ಬರೆಯೋಕೆ.. ಎಂದು ಹೇಳಿಕೊಂಡೇ ಬರ್ತಿರೋ ಸಿನಿಮಾ ಕೆಜಿಎಫ್ ಚಾಪ್ಟರ್ 2. ರಿಲೀಸ್ ಹತ್ತಿರವಾಗುತ್ತಿದ್ದಂತೆ ಒಂದೊಂದೇ ದಾಖಲೆಗಳು, ಅಭಿಮಾನದ ಹರ್ಷೋದ್ಘಾರಗಳು ಸೃಷ್ಟಿಯಾಗುತ್ತಲೇ ಇವೆ. ರಾಕಿಭಾಯ್ ಹವಾ ಹಾಗಿದೆ. ಪ್ರಶಾಂತ್ ನೀಲ್ ಮೇಲೆ ಪ್ರೇಕ್ಷಕ ಇಟ್ಟಿರೋ ನಂಬಿಕೆ, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೃಷ್ಟಿಸಿರೋ ಸಂಚಲನ ಅಂತಾದ್ದು. ವಿಜಯ್ ಕಿರಗಂದೂರು ಪ್ರಚಾರದ ಯಾವ ಅವಕಾಶವನ್ನೂ ಬಿಟ್ಟಿಲ್ಲ. ದಾಖಲೆಗಳು ಸೃಷ್ಟಿಯಾಗಲೇಬೇಕಲ್ಲವೇ.. ಸಾವಿರ ಕೋಟಿ ಕಲೆಕ್ಷನ್ ಮಿಸ್ಸೇ ಇಲ್ಲ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪಂಡಿತರು.
ಕೆಜಿಎಫ್ ಚಾಪ್ಟರ್ 2 ಹವಾ ಎಫೆಕ್ಟ್ ಹೇಗಿದೆಯೆಂದರೆ ತಮಿಳಿನ ಬೀಸ್ಟ್ ಚಿತ್ರದ ಕರ್ನಾಟಕ ರೈಟ್ಸ್ ಕೇವಲ 7 ಕೋಟಿಗೆ ಸೇಲ್ ಆಗಿದೆ ಎನ್ನೋ ಮಾಹಿತಿ ಬಂದಿದೆ. ಅದು ವಿಜಯ್ ಚಿತ್ರಗಳ ರೆಗ್ಯುಲರ್ ಮಾರ್ಕೆಟ್ಟಿಗಿಂತ 10 ಕೋಟಿಯಷ್ಟು ಕಡಿಮೆ.
ಹಿಂದಿಯಲ್ಲಿ ರಿಲೀಸ್ ಆಗಬೇಕಿದ್ದ ಜೆರ್ಸಿ ಒಂದು ವಾರ ಮುಂದಕ್ಕೆ ಹೋಗಿದೆ. ಕೆಜಿಎಫ್ ಹವಾದಲ್ಲಿ ಹಿಂದಿ ರಾಜ್ಯಗಳಲ್ಲೇ ಜೆರ್ಸಿಗೆ ಸರಿಯಾಗಿ ಥಿಯೇಟರುಗಳು ಸಿಕ್ಕಿಲ್ಲ. ಸಿಕ್ಕ ಥಿಯೇಟರುಗಳ ಸಂಖ್ಯೆ ದೊಡ್ಡದೇ ಇದ್ದರೂ ಕೆಜಿಎಫ್ ತೂಫಾನ್‍ಗೆ ಬೆಚ್ಚಿ ಬಿದ್ದು ಹಿಂದೆ ಸರಿದಿದೆ ಜೆರ್ಸಿ.
ಪ್ರಪಂಚದ ಪ್ರಸಿದ್ಧ ಯೂಟ್ಯೂಬರ್ಸ್ ಜೊತೆ ಯಶ್ ಮಾತುಕತೆ ನಡೆಸಿರುವುದು ಇನ್ನೊಂದು ವಿಶೇಷ. ಇಂಥಾದ್ದೊಂದು ಪ್ರಯತ್ನ ಮಾಡಿರುವ ಕನ್ನಡದ ಮೊದಲ ನಟ ಯಶ್.
ರಾಜ್ಯದ 550 ಚಿತ್ರಮಂದಿರಗಳಲ್ಲಿ ಯಶ್ ಕಟೌಟ್ ಹಾಕಲಾಗುತ್ತಿದೆ.
ತ್ರಿವೇಣಿ ಥಿಯೇಟರ್ ಬಳಿ 72 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ.
ಮಾಲೂರಿನಲ್ಲಿ 23,400 ಪುಸ್ತಕಗಳಿಂದ 135 ಅಡಿ ಅಗಲ 190 ಅಡಿ ಉದ್ದದ ಪೋಸ್ಟರ್ ಮಾಡಲಾಗಿದೆ. ಪುಸ್ತಕಗಳಿಂದ ಚಿತ್ರನಟನೊಬ್ಬನ ಪೋಸ್ಟರ್ ಇದೇ ಮೊದಲು.
ಮಹಾರಾಷ್ಟ್ರದ ಪುಣೆಯಲ್ಲಿ ಕೆಜಿಎಫ್ ಹೆಸರಿನ ರೆಸ್ಟೋರೆಂಟ್ ಒಂದು ಓಪನ್ ಆಗಿದೆ.
ಅಮೆರಿಕದಲ್ಲಿ ಬಿಲ್ ಬೋರ್ಡ್‍ಗಳ ಮೂಲಕ ಕೆಜಿಎಫ್ ಪ್ರಚಾರ ನಡೆಯುತ್ತಿದೆ. ಎಲ್‍ಇಡಿ ಮೊಬೈಲ್ ಟ್ರಕ್‍ಗಳ ಮೂಲಕ ಜನರನ್ನು ಸೆಳೆಯುತ್ತಿದೆ ಕೆಜಿಎಫ್ ಟೀಂ & ಫ್ಯಾನ್ಸ್ ಟೀಂ.
ವಿಭಿನ್ನತೆಯೇ ಮೈವೆತ್ತಂತೆ ನಡೆಯುತ್ತಿರುವ ಪ್ರಚಾರದಲ್ಲಿ ಕೆಜಿಎಫ್ ಟೀಂಗಿಂತ ಒಂದು ಹೆಜ್ಜೆ ಮುಂದಿರೋದು ಯಶ್ ಫ್ಯಾನ್ಸ್.