ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗ್ತಿರೋದು ಏಪ್ರಿಲ್ 14ಕ್ಕೆ. ಆರಂಭದಲ್ಲಿ ಏಪ್ರಿಲ್ 14ರಂದು ಅಮೀರ್ ಖಾನ್‍ರ ಲಾಲ್ ಸಿಂಗ್ ಚಡ್ಡಾ ರಿಲೀಸ್ ಘೋಷಿಸಿತ್ತು. ಕೆಜಿಎಫ್ ರಿಲೀಸ್ ಅನೌನ್ಸ್ ಆದ ಮೇಲೆ, ಅದು ಸಿಖ್ಖರ ಹಬ್ಬದ ದಿನ. ಚಿತ್ರವೂ ಸಿಖ್ ಹೀರೋ ಆಗಿರೋ ಸಿನಿಮಾ. ಹೀಗಾಗಿ ಆ ದಿನವೇ ಬರುತ್ತೇನೆ ಎಂದು ಸುದೀರ್ಘ ಪತ್ರವನ್ನೇ ಬರೆದಿದ್ದರು ಅಮೀರ್ ಖಾನ್. ನಂತರ ಅವರಾಗಿಯೇ ಹಿಂದೆ ಹೋದರು. ಅದಾದ ಮೇಲೆ ಏಪ್ರಿಲ್ 14ರಂದು ರಿಲೀಸ್ ಘೋಷಿಸಿಕೊಂಡ ಹಿಂದಿ ಸಿನಿಮಾ ಶಾಹಿದ್ ಕಪೂರ್ ಅಭಿನಯದ ಜೆರ್ಸಿ. ಅದು ತೆಲುಗಿನ ಜೆರ್ಸಿಯ ರೀಮೇಕ್. ಅತ್ತ ತಮಿಳಿನಲ್ಲಿ ರಿಲೀಸ್ ಡೇಟ್ ಘೋಷಿಸಿಕೊಂಡ ಸಿನಿಮಾ ವಿಜಯ್ ಅಭಿನಯದ ಬೀಸ್ಟ್.
ಇದು ಘೋಷಣೆಯಾಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಬೀಸ್ಟ್ ವರ್ಸಸ್ ಕೆಜಿಎಫ್. ಯಶ್ ವರ್ಸಸ್ ವಿಜಯ್ ಅನ್ನೋ ಹ್ಯಾಷ್ ಟ್ಯಾಗ್ ಕಾಣಿಸಿಕೊಂಡವು. ಆದರೆ ಈ ಪ್ರಶ್ನೆಗೆ ಯಶ್ ಕೊಟ್ಟ ಉತ್ತರವೇ ಬೇರೆ.
ಇದು ಯಶ್ ವರ್ಸಸ್ ವಿಜಯ್ ಅಲ್ಲ. ಬೀಸ್ಟ್ ವರ್ಸಸ್ ಕೆಜಿಎಫ್ ಅಲ್ಲ. ಬೀಸ್ಟ್ ಮತ್ತು ಕೆಜಿಎಫ್. ಯಶ್ ಮತ್ತು ವಿಜಯ್. ವಿಜಯ್ ನನಗೆ ಸೀನಿಯರ್. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ವಿಜಯ್ ಸರ್ ಫ್ಯಾನ್ಸ್ ಕೂಡಾ ನನ್ನ ಸಿನಿಮಾ ನೋಡ್ತಾರೆ. ನಮ್ಮ ಫ್ಯಾನ್ಸ್ ಅವರ ಸಿನಿಮಾ ನೋಡ್ತಾರೆ. ಇದೇನು ಎಲೆಕ್ಷನ್ ಅಲ್ಲ. ಅಲ್ಲಾದರೆ ಒಂದೇ ವೋಟ್ ಇರುತ್ತೆ. ಆ ಒಂದು ವೋಟ್‍ಗಾಗಿ ಫೈಟ್ ನಡೆಯುತ್ತೆ. ಇದು ಸಿನಿಮಾ. ಜನ ಎರಡೂ ಸಿನಿಮಾ ನೋಡ್ತಾರೆ. ನಾವು ಮನರಂಜನೆ ಕೊಡ್ತೇವೆ ಎಂದಿದ್ದಾರೆ ಯಶ್.