ಪುನೀತ್ ರಾಜಕುಮಾರ್ ಅವರ ಸೇವೆ ಕನ್ನಡಿಗರಿಗೆ ಗೊತ್ತಾಗಿದ್ದೇ ಪುನೀತ್ ನಿಧನದ ನಂತರ. ಅದುವರೆಗೆ ಪುನೀತ್ ಮೇಲಿದ್ದ ಅಭಿಮಾನ ನಂತರ ಆರಾಧನೆಯಾಗಿ ಬದಲಾಯ್ತು. ಪುನೀತ್ ಅವರಿಗೆ ಕರ್ನಾಟಕ ರತ್ನ, ಸಹಕರಾ ರತ್ನ, ಬಸವಶ್ರೀ ಸೇರಿದಂತೆ ವಿವಿಧ ಪುರಸ್ಕಾರಗಳು ಬಂದವು. ಈಗ ಮೈಸೂರು ವಿವಿ ಗೌರವ ಡಾಕ್ಟರೇಟ್ ಕೂಡಾ ನೀಡಿದೆ. ಪುನೀತ್ ಅವರ ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದಾರೆ. ಮೈಸೂರು ವಿವಿಯ ಆವರಣದಲ್ಲಿ ನಡೆದ 102ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಅಶ್ವಿನಿ ಕೆಲ ಕಾಲ ಭಾವುಕರಾದರು.
ಪುನೀತ್ ಮತ್ತು ನಮ್ಮ ಕುಟುಂಬದ ಪರವಾಗಿ ಈ ಗೌರವ ಸ್ವೀಕರಿಸಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ಈ ವರ್ಷದಿಂದಲೇ ಬಿಸಿನೆಸ್ ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ ಒಂದು ಚಿನ್ನದ ಪದಕವನ್ನು ಪಾರ್ವತಮ್ಮ ರಾಜಕುಮಾರ್ ಹೆಸರಲ್ಲಿ ಹಾಗೂ ಲಲಿತಕಲೆ ವಿಭಾಗದಲ್ಲಿ ಒಂದು ಚಿನ್ನದ ಪದಕವನ್ನು ಪುನೀತ್ ಹೆಸರಲ್ಲಿ ನೀಡುತ್ತೇವೆ ಎಂದು ಘೋಷಿಸಿದರು ಅಶ್ವಿನಿ ಪುನೀತ್ ರಾಜಕುಮಾರ್.
ಈ ಗೌರವ ಡಾಕ್ಟರೇಟ್ ಪದವಿ ನಾನು ಒಳ್ಳೆಯ ಸ್ಥಾನಕ್ಕೆ ಸೇರಿದ್ದೇನೆ ಎಂದು ಹೆಮ್ಮೆ ಪಡಬೇಕು. ಹಾಗೆ ಬದುಕುತ್ತೇವೆ. ಪುನೀತ್ ಮಾರ್ಗದರ್ಶನದಲ್ಲಿ ಬದುಕುತ್ತೇವೆ. ನಮ್ಮ ಜೊತೆ ನೀವಿರಿ ಎಂದರು ರಾಘವೇಂದ್ರ ರಾಜಕುಮಾರ್.
ಗೌರವ ಡಾಕ್ಟರೇಟ್ ಸ್ವೀಕರಿಸಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಇಡೀ ಚಿತ್ರರಂಗ ಪ್ರೀತಿಯಿಂದ ಅಭಿನಂದಿಸಿದೆ.