ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಗೌರವ ನೀಡಿರುವ ರಾಜ್ಯ ಸರ್ಕಾರ ಈಗ ಪುನೀತ್ ಅವರಿಗೆ ಮತ್ತೊಂದು ಪ್ರಶಸ್ತಿ ಘೋಷಿಸಿದೆ. ಪುನೀತ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪುರಸ್ಕಾರ ನೀಡುತ್ತಿದೆ ಕರ್ನಾಟಕ ಸರ್ಕಾರ. ಸ್ವತಃ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಈ ವಿಷಯ ತಿಳಿಸಿದ್ದಾರೆ.
ಅಪ್ಪುಗೆ ಈ ಗೌರವ ನೀಡುತ್ತಿರೋದಕ್ಕೆ ಕಾರಣವೂ ಇದೆ. ಪುನೀತ್ ಸಹಕಾರಿ ವಲಯದ, ರಾಜ್ಯದ ಲಕ್ಷಾಂತರ ರೈತರ ಜೀವನಾಡಿಯಾಗಿರುವ ಕೆಎಂಎಫ್‍ನ ರಾಯಭಾರಿಯಾಗಿದ್ದರು. ಉಚಿತವಾಗಿ ನಂದಿನಿ ಹಾಲನ್ನು ಪ್ರಚಾರ ಮಾಡಿದ್ದರು. ತಂದೆ ಡಾ.ರಾಜ್ ಅವರಂತೆಯೇ ರಾಜ್ಯದ ರೈತರಿಗೆ ನೆರವಾಗುವ ಹಾದಿಯಲ್ಲಿದ್ದರು ಪುನೀತ್. ಕೇವಲ ಕೆಎಂಎಫ್ ಅಷ್ಟೇ ಅಲ್ಲ, ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳ ರಾಯಭಾರಿಯಾಗಿದ್ದರು. ಸರ್ಕಾರಗಳು, ಪಕ್ಷಗಳು ಬದಲಾದರೂ ಪುನೀತ್ ಬದಲಾಗಿರಲಿಲ್ಲ. ರಾಜಕೀಯದಿಂದ ಸದಾ ದೂರವಿದ್ದು, ಜನಪರ ಕಾರ್ಯಕ್ರಮಗಳ ಜೊತೆ ನಿಲ್ಲುತ್ತಿದ್ದರು. ಹೀಗಾಗಿಯೇ ಸಹಕಾರ ರತ್ನ ಗೌರವ ನೀಡಲಾಗುತ್ತಿದೆ.
ಮಾರ್ಚ್ 20ರಂದು ಪ್ರಶಸ್ತಿ ಪ್ರದಾನ ಇದ್ದು, ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.