ಅದನ್ನು ನೋಡಿ ಖುಷಿ ಪಡಬೇಕೋ.. ಏನ್ ಮಾಡೋದಪ್ಪಾ ಎಂದು ತಲೆ ಮೇಲೆ ಕೈ ಹೊತ್ಕೋಬೇಕೋ.. ಗೊತ್ತಾಗದ ಸ್ಥಿತಿ ಕೆಜಿಎಫ್ ಟೀಂನದ್ದು. ಅದು ಕೆಜಿಎಫ್ ಸೃಷ್ಟಿಸಿರೋ ಹವಾ. ಹೀಗಾಗಿ ಪ್ರತಿಯೊಂದನ್ನೂ ಸಹಿಸಿಕೊಳ್ಳಬೇಕು. ಇತ್ತೀಚೆಗೆ ಮಾರ್ಚ್ 8ರಂದು, ಸಂಜೆ 6.18ಕ್ಕೆ ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಆಗುತ್ತೆ ಅನ್ನೋ ಸುದ್ದಿಯೊಂದು ಹೊರಬಿದ್ದಿತ್ತು. ನೋಡಿದರೆ ಅದು ಕೆಜಿಎಫ್ ಟೀಂನದ್ದೇ ಟ್ವೀಟ್ ಅನ್ನೋ ರೀತಿಯಲ್ಲಿರೋ ಪೋಸ್ಟ್. ವಿಚಿತ್ರವೆಂದರೆ ಕೆಜಿಎಫ್ ಹವಾದಲ್ಲಿ ಅದೂ ಕೂಡಾ ಟ್ರೆಂಡ್ ಸೃಷ್ಟಿಸಿಬಿಡ್ತು.
ದಯವಿಟ್ಟು ಇಂತಹ ಸುದ್ದಿಗಳನ್ನೆಲ್ಲ ನಂಬಬೇಡಿ. ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತೆ. ಚಿತ್ರದ ಪ್ರಚಾರವೂ ಶುರುವಾಗುತ್ತೆ. ಸಂಬಂಧಪಟ್ಟ ವಿಷಯಗಳನ್ನು ಅಫಿಷಿಯಲ್ ಪೇಜ್‍ಗಳಲ್ಲಷ್ಟೇ ನೋಡಿ ಎಂದು ಸ್ವತಃ ಕಾರ್ತಿಕ್ ಗೌಡ ಮನವಿ ಮಾಡಿದ್ದಾರೆ. ಕಾರ್ತಿಕ್ ಗೌಡ, ಕೆಜಿಎಫ್ ಚಾಪ್ಟರ್ 2ನ ಕಾರ್ಯಕಾರಿ ನಿರ್ಮಾಪಕ.
ಕೆಜಿಎಫ್ ಚಾಪ್ಟರ್ 1 ಹಿಟ್ ಆಗಿದ್ದರ ಜೊತೆಗೆ, ಚಾಪ್ಟರ್ 2ಗೆ ಇನ್ನಷ್ಟು ನಿರೀಕ್ಷೆ ಬಂದುಬಿಟ್ಟಿದೆ. ಪ್ರಶಾಂತ್ ನೀಲ್ ತಮ್ಮ ತಂಡಕ್ಕೆ ಯಶ್, ಶ್ರೀನಿಧಿ ಶೆಟ್ಟಿ ಜೊತೆಗೆ ಪ್ರಕಾಶ್ ರೈ, ಸಂಜಯ್ ದತ್, ರವೀನಾ ಟಂಡನ್ ಮೊದಲಾದವರನ್ನೆಲ್ಲ ಸೇರಿಸಿಬಿಟ್ಟಿದ್ದಾರೆ. ನಿರೀಕ್ಷೆ ಮೌಂಟ್ ಎವರೆಸ್ಟ್ ಎತ್ತರಕ್ಕೇರಿರುವಾಗ ಇಂತಹದ್ದನ್ನೆಲ್ಲ ಸಹಿಸಿಕೊಳ್ಳಲೇಬೇಕು.