ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಇನ್ನೊಂದು ಆಘಾತ. ಅಶ್ವಿನಿ ಅವರ ತಂದೆ ರೇವನಾಥ್ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಆರೋಗ್ಯವಾಗಿಯೇ ಇದ್ದ ರೇವನಾಥ್ ಅವರ ಆರೋಗ್ಯ ದಿಢೀರನೆ ಏರುಪೇರಾಗಿತ್ತು. ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ರೇವನಾಥ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು. ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದ ಅವರು ಮಾಜಿ ಸಂಸದ ಡಿ.ಬಿ.ಚಂದ್ರೇಗೌಡ ಅವರ ಸಂಬಂಧಿಕರೂ ಹೌದು. ಚಿಕ್ಕಮಗಳೂರಿನ ಮೂಡಿಗೆರೆಯವರು. 20 ವರ್ಷಗಳ ಹಿಂದೆಯೇ ಅವರಿಗೆ ಅಂಜಿಯೋಪ್ಲಾಸ್ಟಿ ಆಗಿತ್ತು.
ಅಳಿಯ ಪುನೀತ್ ಅವರನ್ನು ತುಂಬಾ ಹಚ್ಚಿಕೊಂಡಿದ್ದ ರೇವನಾಥ್, ಪುನೀತ್ ನಿಧನದ ನಂತರ ಆಘಾತಕ್ಕೊಳಗಾಗಿದ್ದರು. ಜೊತೆಗೆ ಮಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಈಗ ಅಶ್ವಿನಿ ತಂದೆಯ ಸಾವಿನ ಆಘಾತವನ್ನೂ ಸಹಿಸಿಕೊಳ್ಳಬೇಕು. ಅಶ್ವಿನಿ ಅವರ ತಂಗಿ ಆಸ್ಟ್ರೇಲಿಯಾದಲ್ಲಿದ್ದು, ಅವರು ಬಂದ ನಂತರ ಅಂತ್ಯಕ್ರಿಯೆ ನೆರವೇರಲಿದೆ.