ಏಕ್ ಲವ್ ಯಾ ಚಿತ್ರದ ಪ್ರಚಾರ ಜೋರಾಗುತ್ತಿದೆ. ನಿರೀಕ್ಷೆಯಂತೆಯೇ ಪ್ರೇಮ್ ತಮ್ಮ ಚಿತ್ರವನ್ನು ಅದ್ಧೂರಿಯಾಗಿ ಪ್ರಮೋಟ್ ಮಾಡುತ್ತಿದ್ದಾರೆ. ಈ ಬಾರಿ ಅವರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತೆರೆಗೆ ತರುತ್ತಿರೋದು ತಮ್ಮ ಪತ್ನಿ ರಕ್ಷಿತಾ ಅವರ ತಮ್ಮ ರಾಣಾನನ್ನು. ಹೀಗಾಗಿ ಚಿತ್ರದ ಬಗ್ಗೆ ಅದ್ಧೂರಿ ಪ್ರಚಾರ ಕೈಗೊಂಡಿದ್ದಾರೆ.
ಚಿತ್ರದ ಪ್ರೀಮಿಯರ್ ಷೋವನ್ನು ಫೆಬ್ರವರಿ 23ರಂದು ಇಟ್ಟುಕೊಂಡಿದ್ದಾರೆ. 24ಕ್ಕೆ ರಾಜ್ಯಾದ್ಯಂತ ರಿಲೀಸ್. ಆ ಪ್ರೀಮಿಯರ್ ಶೋಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದಾರೆ ಪ್ರೇಮ್. ಜೊತೆಗೆ ಎಂದಿನಂತೆ ಪ್ರೇಮ್ ಅವರ ಚಿತ್ರರಂಗದ ಬಳಗ ಇರಲಿದೆ.
ಏಕ್ ಲವ್ ಯಾ ಚಿತ್ರಕ್ಕೆ ರಾಣಾ ಹೀರೋ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ಹೀರೋಯಿನ್ಸ್. ರಕ್ಷಿತಾ ಪ್ರೇಮ್ ನಿರ್ಮಾಪಕಿ. ಪ್ರೇಮ್ ಅವರೇ ಹೇಳಿರೋ ಹಾಗೆ ಚಿತ್ರದ ಇನ್ನೊಬ್ಬ ಹೀರೋ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಪ್ರೇಮ್ ಆಹ್ವಾನ ನೀಡಿದ್ದಾರೆ.