ರಾಜ್ಯದಲ್ಲೀಗ ಇರೋದು 587 ಥಿಯೇಟರುಗಳು. 2 ವರ್ಷದ ಹಿಂದೆ ಕೊರೊನಾ, ಲಾಕ್ ಡೌನ್ ಶುರುವಾಗುವ ಮುನ್ನ ಇದ್ದ ಥಿಯೇಟರುಗಳ ಸಂಖ್ಯೆ 636. ಅವುಗಳಲ್ಲಿ ಬಹುತೇಕ ಥಿಯೇಟರುಗಳು ಬಾಗಿಲು ಮುಚ್ಚಿವೆ. ಮೈಸೂರೊಂದರಲ್ಲೇ ಕಣ್ಣು ಮುಚ್ಚಿದ ಥಿಯೇಟರ್ಸ್ ಸಂಖ್ಯೆ 8. ಈಗ ಇರುವ ಕೆಲವೇ ಥಿಯೇಟರುಗಳೂ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ.
ಕೊರೊನಾ, 50:50 ರೂಲ್ಸ್ಗಳಿಂದಾಗಿ ತತ್ತರಿಸಿರುವ ಮೈಸೂರಿನ ಸಿಂಗಲ್ ಸ್ಕ್ರೀನ್ ಟಾಕೀಸ್ ಮಾಲೀಕರು ಥಿಯೇಟರ್ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಮೈಸೂರಿನ ರಾಜ್ಕಮಲ್, ಸಂಗಂ, ಗಾಯತ್ರಿ ಸೇರಿದಂತೆ ಹಲವು ಥಿಯೇಟರ್ ಮಾಲೀಕರು
ಸರ್ಕಾರ ನಿರ್ಬಂಧಗಳನ್ನು ವಾಪಸ್ ಪಡೆಯುವವರೆಗೆ ಥಿಯೇಟರ್ ಬಾಗಿಲು ಮುಚ್ಚೋಣ ಎಂದು ನಿರ್ಧರಿಸಿದ್ದಾರೆ. ಈಗಾಗಲೇ ನಿರ್ಧಾರವನ್ನು ಜಾರಿಗೂ ತಂದಿದ್ದು, ಥಿಯೇಟರ್ಗಳ ಬಾಗಿಲು ಈಗಾಗಲೇ ಬಂದ್ ಆಗಿದೆ.
ಸರ್ಕಾರದ ನಿರ್ಧಾರ ಮತ್ತು ಅನಿಶ್ಚಿತತೆಯಿಂದಾಗಿ ಚಿತ್ರ ನಿರ್ಮಾಪಕರು ಮತ್ತು ವಿತರಕರು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿಲ್ಲ. ಹೊಸ ಸಿನಿಮಾ ಬರದೇ ಇದ್ದರೆ ಬಿಸಿನೆಸ್ ನಡೆಯೋದು ಹೇಗೆ? ಒಂದೊಂದು ಥಿಯೇಟರಿನಲ್ಲಿಯೂ ಕನಿಷ್ಠ 12ರಿಂದ 25 ಜನ ಕೆಲಸಗಾರರಿರುತ್ತಾರೆ. ಅವರ ಸಂಬಳ, ಥಿಯೇಟರ್ ವೆಚ್ಚ ಎಲ್ಲವೂ ಮಾಲೀಕರ ಹೆಗಲ ಮೇಲೆ ಬೀಳುತ್ತದೆ. ಈಗಾಗಲೇ 2 ವರ್ಷ ವ್ಯವಹಾರವಿಲ್ಲದೆ ಎಲ್ಲವನ್ನೂ ಕೈಯಿಂದ ಕೊಟ್ಟು ನರಳಿದ್ದಾರೆ. ಹೀಗಿರುವಾಗ ಪದೇ ಪದೇ ಆಗುವ ಇಂತಹ ನಿಯಮಗಳಿಂದಾಗಿ ಬಿಸಿನೆಸ್ ಕಷ್ಟವಾಗುತ್ತಿದೆ ಎನ್ನುತ್ತಾರೆ ಪ್ರದರ್ಶಕರ ಸಂಘದ ಉಪಾಧ್ಯಕ್ಷ ಎಂ.ಆರ್. ರಾಜಾರಾಂ.
ಇದು ವಾಸ್ತವ ಪರಿಸ್ಥಿತಿಯೂ ಹೌದು. ಕೊರೊನಾ ವೇಳೆ ಸರ್ಕಾರಗಳು ಅತ್ಯಂತ ನಿಕೃಷ್ಟವಾಗಿ ಕಂಡ ಉದ್ಯಮ ಎಂದಿದ್ದರೆ ಅದು ಚಿತ್ರರಂಗ. ಯಾವುದೇ ನೆರವು, ಸೌಲಭ್ಯವನ್ನೂ ನೀಡದೆ ಮರೆತುಬಿಟ್ಟಿದೆ. ಈಗ ಚಿತ್ರರಂಗ ಅದರಲ್ಲೂ ಥಿಯೇಟರ್ ಮಾಲೀಕರು ಯಾಕಾದರೂ ಚಿತ್ರಮಂದಿರ ಕಟ್ಟಿದೆವೋ ಎಂದು ಪರಿತಪಿಸುವಂತಾಗಿದೆ. ವಿಚಿತ್ರವೆಂದರೆ ತಮ್ಮ ತಮ್ಮ ಚಿತ್ರಗಳ ಬಿಸಿನೆಸ್ಸಿನ ಮೂಲ ಸ್ಥಾನವಾಗಿರೋ ಚಿತ್ರಮಂದಿರಗಳ ಸಮಸ್ಯೆ ಬಗ್ಗೆ ಇದುವರೆಗೆ ಯಾವುದೇ ಸ್ಟಾರ್ ಕಲಾವಿದ, ನಿರ್ಮಾಪಕರೂ ತಲೆಕೆಡಿಸಿಕೊಳ್ಳದಿರೋದು..