ಸಮನ್ವಿ. 6 ವರ್ಷದ ಪುಟ್ಟ ಬಾಲಕಿಯ ಸಾವಿಗೆ ಕರುನಾಡು ಕಂಬನಿಗರೆಯುತ್ತಿದೆ. ಸಮನ್ವಿ ಇಡೀ ಕರುನಾಡಿಗೆ ಪರಿಚಯವಾಗಿದ್ದು ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋದಿಂದ. ಸಮನ್ವಿಯ ಮುದ್ದು ಮುದ್ದಾದ ಮಾತು, ನಡವಳಿಕೆ ಪ್ರೇಕ್ಷಕರ ಹೃದಯ ಗೆದ್ದಿತ್ತು.
ಟಿಪ್ಪರ್ ಚಾಲಕನ ಅತಿವೇಗದ ಚಾಲನೆಗೆ ಈಗ ಸಮನ್ವಿ ಬಲಿಯಾಗಿದ್ದರೆ, ತಾಯಿ ಅಮೃತಾ ನಾಯ್ಡು ಆಸ್ಪತ್ರೆಯಲ್ಲಿದ್ದಾರೆ. ಸ್ಕೂಟಿಯಲ್ಲಿ ಮಗಳೊಂದಿಗೆ ಹೋಗುತ್ತಿದ್ದ ಅಮೃತಾ ನಾಯ್ಡು ಅವರ ಗಾಡಿ, ಟಿಪ್ಪರ್ನ ಬಂಪರ್ಗೆ ತಗುಲಿ ತಾಯಿ ಒಂದು ಕಡೆ ಬಿದ್ದರೆ, ಮಗಳು ಇನ್ನೊಂದು ಕಡೆ ಬಿದ್ದಿದ್ದಾಳೆ. ಪುಟ್ಟ ಬಾಲಕಿಯ ಮೇಲೆ ಟಿಪ್ಪರ್ ಹರಿದು ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ಹೋಗುತ್ತಿದ್ದಾಗ ನಡೆದಿರೋ ದುರಂತವಿದು.
ಈ ಸಮನ್ವಿ ಅಮೃತಾ ನಾಯ್ಡು ಅವರ ಮಗಳು. ಅಮೃತಾ ನಾಯ್ಡು ಪ್ರಖ್ಯಾತ ಹರಿಕಥೆ ವಿದ್ವಾಂಸ ಗುರುರಾಜುಲು ನಾಯ್ಡು ಅವರ ಮಗಳು. ಒಂದು ಕಾಲದಲ್ಲಿ ಅವರೂ ಹರಿಕಥೆ ಮಾಡುತ್ತಿದ್ದವರೇ. ಇತ್ತೀಚೆಗೆ ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ನಟಿಸುತ್ತಿದ್ದರು. ಮೊದಲ ಮಗಳನ್ನು ಹೆರಿಗೆಯಾದ 20 ದಿನಗಳಲ್ಲಿ ಕಳೆದುಕೊಂಡಿದ್ದ ಅಮೃತಾ ನಾಯ್ಡು, ಈಗ ಜೀವದ ಉಸಿರಾಗಿದ್ದ 2ನೇ ಮಗಳನ್ನೂ ಕಳೆದುಕೊಂಡಿದ್ದಾರೆ. ಅಪಘಾತ ಸಂಭವಿಸಿದಾಗ ಅಮೃತಾ ಗರ್ಭಿಣಿ.